ಬಿಜೆಪಿ ವಿರುದ್ಧ ಕೈ ದೂರು

ಬೆಂಗಳೂರು, ಜ.೩೦- ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯದ ಇತರ ಸಚಿವರ ವಿರುದ್ಧ “ಅವಹೇಳನಕಾರಿ ವಿಷಯ” ಪೋಸ್ಟ್ ಮಾಡಿದ ಆರೋಪದ ಮೇಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೈಬರ್ ಪೊಲೀಸ್ ಠಾಣೆಯಲ್ಲಿ ರಾಜ್ಯ ಬಿಜೆಪಿಯ ಎಕ್ಸ್ ಖಾತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ “ಹಗರಣ ಪ್ರಭು” ಎಂಬ ಶೀರ್ಷಿಕೆಯೊಂದಿಗೆ ಸಚಿವರ ಛಾಯಾಚಿತ್ರ ಪೋಸ್ಟ್ ಮಾಡಿದ ಒಂದು ದಿನದ ನಂತರ ಮತ್ತು “ಹಗಲು ರಾತ್ರಿ ರಾಜ್ಯವನ್ನು ಲೂಟಿ ಮಾಡುತ್ತಿರುವ ಹಗರಣ ಸಾಮ್ರಾಜ್ಯ” ಅಸ್ತಿತ್ವದಲ್ಲಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಈ ಪ್ರಕರಣ ದಾಖಲಾಗಿದೆ.

“ಹಗರಣ ಪ್ರಭು” ಎಂಬ ಶೀರ್ಷಿಕೆಯೊಂದಿಗೆ ಮಂತ್ರಿಗಳು “ಕರ್ನಾಟಕವನ್ನು ಹಗಲು ರಾತ್ರಿ ಲೂಟಿ ಮಾಡುತ್ತಿರುವ ” ಸರ್ಕಾರ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ, ಬಿಜೆಪಿಯ ಎಕ್ಸ್ ಖಾತೆಯು ವ್ಯಕ್ತಿತ್ವ ಹರಣ, ಮತ್ತು ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.

ಪೊಲೀಸರು ದೂರನ್ನು ಸ್ವೀಕರಿಸಿ ಸ್ವೀಕೃತಿ ಪತ್ರ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಬಹಳ ದಿನಗಳಿಂದ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದೆ.

ಕಳೆದ ತಿಂಗಳು, ರಾಜ್ಯದಲ್ಲಿ ಶೇ. ೬೩ ರಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ನ್ಯಾಯಮೂರ್ತಿ ವೀರಪ್ಪ ಅವರ ಹೇಳಿಕೆಯನ್ನು ನೆನಪಿಸಿಕೊಂಡ ಪಕ್ಷ,ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಯಾವುದೇ ರಾಜ್ಯ ಚುನಾವಣೆಗೆ ಹಣಕಾಸು ಒದಗಿಸಲು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ “ಎಟಿಎಂ” ಆಗಿ ಮಾರ್ಪಟ್ಟಿದೆ ಎಂದು ಹೇಳಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹೊರಿಸಲಾದ “ಶೇಕಡಾ ೪೦ ಕಮಿಷನ್” ಆರೋಪದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದನ್ನು ನೆನಪಿಸಿಕೊಂಡ ಪಕ್ಷದ ನಾಯಕ ಆರ್. ಅಶೋಕ, “ಸರ್ಕಾರದ ವಿರುದ್ಧ ಶೇ. ೬೩ ರಷ್ಟು ಭ್ರಷ್ಟಾಚಾರ ಆರೋಪದ ನಂತರ ಸರ್ಕಾರ ಯಾವ ತನಿಖೆಗೆ ಆದೇಶಿಸುತ್ತದೆ” ಎಂದಿದ್ದಾರೆ.

ಅಶೋಕ ಅವರ ಆರೋಪವನ್ನು ಸಿದ್ದರಾಮಯ್ಯ ನಿರಾಕರಿಸಿದ್ದರು, ವಿರೋಧ ಪಕ್ಷವು “ಸತ್ಯಗಳನ್ನು ತಿರುಚುತ್ತಿದೆ” ಮತ್ತು ತನ್ನದೇ ಆದ ಹಿಂದಿನ ಅಧಿಕಾರಾವಧಿಯಿಂದ ಆರೋಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.

  • ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಆರೋಪ
  • ಸಚಿವರ ವಿರುದ್ಧ ಆರೋಪಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ದೂರು
  • ಭ್ರಷ್ಟಾಚಾರದ ಆರೋಪಕ್ಕೆ ಕಾಂಗ್ರೆಸ್ ದೂರು ದಾಖಲು
  • ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಹಿನ್ನಲೆ
  • ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ
  • ರಾಜ್ಯ ಸರ್ಕಾರದ ವಿರುದ್ಧ ಅರೋಪ ಹಿನ್ನೆಲೆಯಲ್ಲಿ ಈ ದೂರು ದಾಖಲು