
ಐಜ್ವಾಲ್, ಸೆ.೧೩- ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿ ಹೊಸ ದರಗಳು ಇದೇ ತಿಂಗಳ ೨೨ರಿಂದ ಅಧಿಕೃತವಾಗಿ ಜಾರಿಯಾಗಲಿದ್ದು ಕ್ಯಾನ್ಸರ್‍ನಂತಹ ಗಂಭೀರ ಕಾಯಿಲೆಗಳಿಗೆ ಔಷಧಿ ಹೆಚ್ಚು ಕೈಗೆಟುಕುವ ಬೆಲೆಗೆ ಸಿಗಲಿದ್ದು ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳು ಸಹ ಅಗ್ಗವಾಗಲಿದ್ದು ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ
ಜಿಎಸ್ ಟಿ ಹೊಸ ದರ ಜಾರಿಗೆ ಬಂದ ನಂತರ ಸ್ಕೂಟರ್‌ಗಳು ಮತ್ತು ಕಾರು ತಯಾರಿಸುವ ಅನೇಕ ಕಂಪನಿಗಳು ಈಗಾಗಲೇ ಬೆಲೆಗಳನ್ನು ಕಡಿಮೆ ಮಾಡಿವೆ. ಈ ಬಾರಿ ದಸರಾ ದೀಪಾಬಳಿ ಹಬ್ಬದ ಋತು ದೇಶಾದ್ಯಂತ ಹೆಚ್ಚು ರೋಮಾಂಚನಕಾರಿಯಾಗಿರಲಿದೆ ಮತ್ತು ಜನತೆಗೆ ಉಡುಗೊರೆಯಾಗಿದೆ ಎಂದಿದ್ದಾರೆ
ಐದು ರಾಜ್ಯಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಮ್‌ನಲ್ಲಿ ನಿರ್ಮಾಣ ಮಾಡಿರುವ ಬೈರಾಬಿ-ಸೈರಾಂಗ್ ರೈಲ್ವೆ ೮,೦೭೦ ಕೋಟಿ ರೂಪಾಯಿ ಮೊತ್ತದ ರೈಲ್ವೆ ಯೋಜನೆಗಳಿಗೆಚಾಲನೆ ನೀಡಿ ಮಾತನಾಡಿದ ಅವರು ಜಿಎಸ್‌ಟಿ ಹೊಸ ದರ ದೇಶದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ಧಾರೆ
ಸುಧಾರಣೆಗಳ ಭಾಗವಾಗಿ, ಹೆಚ್ಚಿನ ಹೋಟೆಲ್‌ಗಳ ಮೇಲಿನ ಜಿಎಸ್ ಟಿ ದರ ಕಡಿಮೆಯಾಗಲಿದೆ. ವಿವಿಧ ಸ್ಥಳಗಳಿಗೆ ಪ್ರಯಾಣಿಸುವುದು, ಹೋಟೆಲ್‌ಗಳಲ್ಲಿ ಉಳಿಯುವುದು ಮತ್ತು ಹೊರಗೆ ಊಟ ಮಾಡುವುದು ಅಗ್ಗವಾಗುತ್ತದೆ. ಹೆಚ್ಚಿನ ಜನರು ದೇಶದ ವಿವಿಧ ಭಾಗಗಳನ್ನು ಪ್ರಯಾಣಿಸಲು, ಅನ್ವೇಷಿಸಲು ಮತ್ತು ಆನಂದಿಸಲು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ
ತೆರಿಗೆ ದರ ಗಣನೀಯ ಇಳಿಕೆ:
ದೇಶದಲ್ಲಿ ೨೦೧೪ ಕ್ಕಿಂತ ಮೊದಲು, ಟೂತ್‌ಪೇಸ್ಟ್, ಸೋಪ್ ಮತ್ತು ಎಣ್ಣೆಯಂತಹ ದೈನಂದಿನ ಅಗತ್ಯ ವಸ್ತುಗಳ ಮೇಲೆ ಸಹ ಶೇಕಡಾ ೨೭ ತೆರಿಗೆ ವಿಧಿಸಲಾಗುತ್ತಿತ್ತು. ಇಂದು, ಕೇವಲ ಶೇಕಡಾ ೫ ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದ್ದು ಜನ ಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ
ಕಾಂಗ್ರೆಸ್ ಆಳ್ವಿಕೆಯಲ್ಲಿ, ಔಷಧಿಗಳು, ಪರೀಕ್ಷಾ ಕಿಟ್‌ಗಳು ಮತ್ತು ವಿಮಾ ಪಾಲಿಸಿಗಳಿಗೆ ಭಾರಿ ತೆರಿಗೆ ವಿಧಿಸಲಾಗುತ್ತಿತ್ತು. ಅದಕ್ಕಾಗಿಯೇ ಆರೋಗ್ಯ ರಕ್ಷಣೆ ದುಬಾರಿಯಾಗಿತ್ತು. ಸಾಮಾನ್ಯ ಕುಟುಂಬಗಳಿಗೆ ವಿಮೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಇಂದು, ಇವೆಲ್ಲವೂ ಕೈಗೆಟುಕುವಂತಾಗಿದೆ ಎಂದು ಆರೋಪಿಸಿದ್ದಾರೆ.
ಜಿಡಿಪಿ ದರ ಏರಿಕೆ: ಪಿಎಂ
೨೦೨೫-೨೬ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇ. ೭.೮ ರಷ್ಟು ಬೆಳವಣಿಗೆ ಕಂಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದರರ್ಥ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ರಫ್ತುಗಳ ಬೆಳವಣಿಗೆ ಸಹ ನೋಡುತ್ತಿದ್ದೇವೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಸೈನಿಕರು ಭಯೋತ್ಪಾದನೆಯನ್ನು ಪ್ರಾಯೋಜಿಸಿದವರಿಗೆ ಹೇಗೆ ಪಾಠ ಕಲಿಸಿದರು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ ಎಂದರು.
ಇಡೀ ರಾಷ್ಟ್ರ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಯ ಭಾವನೆಯಿಂದ ತುಂಬಿತ್ತು. ಕಾರ್ಯಾಚರಣೆಯಲ್ಲಿ, ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳು ದೇಶವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ರಾಷ್ಟ್ರೀಯ ಭದ್ರತೆ, ಆರ್ಥಿಕತೆ ಮತ್ತು ಉತ್ಪಾದನಾ ವಲಯದ ಬೆಳವಣಿಗೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಸರ್ಕಾರ ಪ್ರತಿಯೊಬ್ಬ ನಾಗರಿಕ, ಪ್ರತಿ ಕುಟುಂಬ ಮತ್ತು ಪ್ರತಿಯೊಂದು ಪ್ರದೇಶದ ಕಲ್ಯಾಣಕ್ಕೆ ಬದ್ಧವಾಗಿದೆ. ಜನರ ಸಬಲೀಕರಣದ ಮೂಲಕ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲಾಗುತ್ತದೆ. ಪ್ರಯಾಣದಲ್ಲಿ, ಮಿಜೋರಾಂನ ಜನರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ