ಶಿಡ್ಲಘಟ್ಟ:-ಮೇ,೩೧-ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದ ಆರಂಭವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಿಕ್ಷಕರ ತಂಡದ ನೇತೃತ್ವದಲ್ಲಿ ಹೊಸದಾಗಿ ಆಗಮಿಸುವ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತದೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪೋಷಕರು ಸಹ ಮಕ್ಕಳೊಂದಿಗೆ ಭಾಗವಹಿಸಿ ಶಾಲಾ ಆರಂಭದ ಸಂಭ್ರಮವನ್ನು ಹಂಚಿಕೊಂಡರು. ಶಾಲಾ ಆಡಳಿತ ಮಂಡಳಿಯ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಮತ್ತು ಉಚಿತ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು. ಮಕ್ಕಳ ಮುಖದಲ್ಲಿ ಸಂತೋಷದ ನಗು ಮನೆಮಾಡಿದ್ದು, ಶಿಕ್ಷಣದ ಮಹತ್ವವನ್ನು ತಿಳಿಸುವಂತಹ ಈ ಪ್ರಾರಂಭವು ಎಲ್ಲರಲ್ಲೂ ಹೊಸ ಉತ್ಸಾಹ ಕಾಣಿಸಿಕೊಂಡಿದೆ.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ, ವಿದ್ಯಾರ್ಥಿಗಳಿಂದ ಸ್ವಾಗತಗೀತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ
ಸೈದಾ ಇಷ್ಟತ್ ರವರು ಭಾಷಣ ಮಾಡುತ್ತಾ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸರ್ಕಾರಿ ಶಾಲೆಗಳ ಪಾತ್ರವನ್ನು ವಿವರಿಸಿದರು. ಹಾಗೂ ಶಾಸಗಿ ಶಾಲೆಗಳಿಂದ ದೂರ ವಿದ್ದು ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಪೋಷಕರ ಸಹಕಾರಕ್ಕೂ ಧನ್ಯವಾದ ಅರ್ಪಿಸಿದರು.
ಸಹ ಶಿಕ್ಷಕರಾದ ಸಿಎಲ್ ಸತೀಶ್ ರವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಶಿಕ್ಷಣವನ್ನು ಮಕ್ಕಳ ಹಕ್ಕಾಗಿ ಪರಿಗಣಿಸಿ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಹೊಸ ಹಂತದಲ್ಲಿ ಉತ್ತಮ ಸಾಧನೆ ಮಾಡಲೆಂದು ಶುಭ ಕೋರುತ್ತಾ ಸರ್ಕಾರಿ ಶಾಲೆಗಳು ಇಂತಹ ಪ್ರಾರಂಭೋತ್ಸವಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯದ ಬುನಾದಿಯಾಗುತ್ತವೆ ಎಂಬ ನಂಬಿಕೆಯನ್ನು ಇಂತಹ ಕಾರ್ಯಕ್ರಮಗಳು ಉಂಟುಮಾಡುತ್ತದೆ ಎಂದರು.
ಸಂದರ್ಭದಲ್ಲಿ ಶಿಕ್ಷಕರಾದ ಅನ್ನಪೂರ್ಣ ಹಿರೇಮಠ, ರಮಾ, ಕುಸುಮ, ನಳಿನ, ಪೂರ್ಣಿಮಾ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.