ಹಳೆ ಪದ್ಧತಿಗೆ ಗುಡ್ ಬೈ:ಬಂತು ಕಸಗುಡಿಸುವ ಯಂತ್ರ

ಬೆಂಗಳೂರು, ಫೆ. ೬- ಬೆಂಗಳೂರಿನಲ್ಲಿ ಇನ್ನು ಮುಂದೆ ಪೌರ ಕಾರ್ಮಿಕರು ಯಂತ್ರಗಳನ್ನು ಬಳಸಿ ಕಸ ಗುಡಿಸುವ ವ್ಯವಸ್ಥೆ ಜಾರಿಯಾಗಲಿದೆ.


ಇನ್ನು ಮುಂದೆ ಪೌರ ಕಾರ್ಮಿಕರು ಪೊರಕೆ ಹಿಡಿದು ಕಸ ಗುಡಿಸುವ ಬದಲು ಯಂತ್ರಗಳನ್ನು ಬಳಸಿ ಬೀದಿಗಳನ್ನು ಸ್ವಚ್ಛಗೊಳಿಸುವರು. ಈ ಮೂಲಕ ಪೊರಕೆಗಳಿಂದ ಕಸ ಗುಡಿಸುವ ಹಳೆಯ ಪದ್ಧತಿಗೆ ಜಿಬಿಎ ಗುಡ್ ಬೈ ಹೇಳಲಿದೆ.


ಬೆಂಗಳೂರಿನಲ್ಲಿ ಕಸ ಗುಡಿಸಲೆಂದೇ ೩೩ ಕಸ ಗುಡಿಸುವ ಯಂತ್ರಗಳನ್ನು ಜಿಬಿಎ ಖರೀದಿಸಿದೆ. ಈ ಯಂತ್ರಗಳು ೫೦ ಎಲ್. ಕಸ ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಯಂತ್ರಗಳಿಂದ ಹೆಚ್ಚು ಶ್ರಮ ವಹಿಸದೆ ಪೌರ ಕಾರ್ಮಿಕರು ಕಸ ಗುಡಿಸಲಿದ್ದಾರೆ. ಜತೆಗೆ ಪೌರ ಕಾರ್ಮಿಕರಿಗೆ ಸಮಯದ ಉಳಿತಾಯವೂ ಆಗಲಿದೆ.


ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ರಸ್ತೆಗಳಲ್ಲಿ ಯಂತ್ರಗಳ ಮೂಲಕ ಕಸ ಗುಡಿಸುವ ಕೆಲಸಕ್ಕೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಜಿಬಿಎ ವ್ಯಾಪ್ತಿಯ ೫ ನಗರ ಪಾಲಿಕೆಗಳಲ್ಲಿ ಇದೇ ರೀತಿಯ ಯಂತ್ರಗಳ ಮೂಲಕ ಕಸ ಗುಡಿಸುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
.