Home ಜಿಲ್ಲೆ ಕಲಬುರಗಿ ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯ 6.73 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯ 6.73 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ,ಮಾ.11-ಬೈಕ್ ಮೇಲೆ ಬಂದ 20-25 ವರ್ಷ ವಯಸ್ಸಿನ ಮೂವರು ಅಪರಿಚಿತ ವ್ಯಕ್ತಿಗಳು ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.
ವಾಡಿ ಪಟ್ಟಣದ ವೈಟ್ ಹೌಸ್ ಬಿರ್ಲಾ ಏರಿಯಾ ನಿವಾಸಿ ಸೈಯ್ಯದಾ ಸಾಜೀರಾ ಮತೀನ್ ಎಂಬುವವರ 6.73 ಲಕ್ಷ ರೂ.ಮೌಲ್ಯದ ಚಿನ್ನಾಭರಣ, 20 ಸಾವಿರ ರೂ.ಮೌಲ್ಯದ ಮೊಬೈಲ್ ಮತ್ತು 17 ಸಾವಿರ ರೂ.ನಗದು ಹಣವಿದ್ದ ವ್ಯಾನಿಟಿ ಬ್ಯಾಗ್‍ನ್ನು ಕಸಿದುಕೊಂಡು ಹೋಗಲಾಗಿದ್ದು, ಅವರು ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸೈಯ್ಯದಾ ಸಾಜೀದಾ ಮತೀನ್ ಅವರು ಕಲಬುರಗಿಯ ಜಮ್ ಜಮ್ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ರೋಜಾ ರಕ್ಕಾಮಿ ಕಾರ್ಯಕ್ರಮಕ್ಕೆಂದು ವಾಡಿಯಿಂದ ರೈಲ್ವೆ ಮುಖಾಂತರ ಪತಿ ಮತ್ತು ಮಗನೊಂದಿಗೆ ಆಗಮಿಸಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ವಾಡಿಗೆ ಹೋಗಲೆಂದು ರೈಲ್ವೆ ಸ್ಟೇಷನ್‍ಗೆ ಹೋಗುವ ಆಟೋ ಹತ್ತಿದ್ದಾರೆ. ಆಟೋ ಖರ್ಗೆ ಸರ್ಕಲ್ ಹತ್ತಿರ ಹೋದಾಗ ಇಬ್ಬರು ಅಪರಿಚಿತರು ಇದೇ ಆಟೋ ಹತ್ತಿದ್ದು, ಆಟೋ ಮುಂದೆ ಹೋಗುತ್ತಿದ್ದಂತೆಯೇ ಬೈಕ್ ಮೇಲೆ ಬಂದ 20-25 ವರ್ಷ ವಯಸ್ಸಿನ ಮೂವರು ಅಪರಿಚಿತರು ಇವರ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.