
ಯಾದಗಿರಿ, ಎ.1: ಎಸಿ ಕೋಚ್‍ನಲ್ಲಿ ಬಂಗಾರ ಹಾಗೂ ನಗದು ಕಳ್ಳತನವಾದ ಘಟನೆಗೆ ಸಂಬಂಧಿಸಿ ರೈಲ್ವೆ ಅಧಿಕಾರಿಗಳ ನಡೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಯಾದಗಿರಿ ಜಿಲ್ಲೆಯ ಮುದ್ನಾಳ ಉಮಾಲ್ ನಾಯಕ್ ತಂಡದ ಲಲಿತಾ ಪವರ್ ಮತ್ತು ಅವರ ಪತಿ ರಮೇಶ್ ರಾಮು ಪವರ್ ಅವರು ಮುಂಬೈಯಿಂದ ನಾಗರಕೋಲ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಯಾದಗಿರಿಗೆ ಪ್ರಯಾಣಿಸುತ್ತಿದ್ದರು. ಬಿ3 ಕೋಚ್‍ನ 66 ಮತ್ತು 71 ಆಸನಗಳಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ರಾತ್ರಿ ನಿದ್ರೆಯಲ್ಲಿದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಲಲಿತಾ ಪವರ್ ಅವರ ಒಂದುವರೆ ತೊಲೆ ಬಂಗಾರ ಹಾಗೂ ?5,000 ನಗದು ಹಣ ಕಳವುಗೊಂಡಿರುವುದು ಗಮನಕ್ಕೆ ಬಂದಿದೆ. ಎಸಿ ಕೋಚ್‍ನಲ್ಲೇ ಇಂತಹ ಕಳ್ಳತನ ನಡೆದಿರುವುದು ಆಶ್ಚರ್ಯಕರವಾಗಿದೆ ಎಂದು ಪತಿ ರಮೇಶ್ ರಾಮು ಪವರ್ ತಿಳಿಸಿದ್ದಾರೆ.
ಘಟನೆಯ ನಂತರ ಯಾದಗಿರಿ ರೈಲ್ವೆ ಠಾಣೆಗೆ ದೂರು ನೀಡಲು ಪ್ರಯತ್ನಿಸಿದಾಗ, ಅಲ್ಲಿನ ಅಧಿಕಾರಿಗಳು ಪ್ರಕರಣ ದಾಖಲಿಸದೆ ವಾಡಿ ರೈಲ್ವೆ ಸ್ಟೇಷನ್‍ನಲ್ಲಿ ದೂರು ನೀಡುವಂತೆ ಸೂಚಿಸಿದ್ದಾಗಿ ಪೀಡಿತರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಾಡಿ ಜಂಕ್ಷನ್‍ನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಎಸಿ ಕೋಚ್‍ನಲ್ಲೇ ಕಳ್ಳತನ ನಡೆದಿರುವುದು ಮತ್ತು ಪ್ರಾಥಮಿಕ ಹಂತದಲ್ಲೇ ದೂರು ಸ್ವೀಕರಿಸಲು ವಿಳಂಬವಾದುದು ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಂಗಾರ ಮತ್ತು ನಗದು ಕಳೆದುಕೊಂಡ ದಂಪತಿ ದಿಗ್ಭ್ರಮೆಗೆ ಒಳಗಾಗಿದ್ದು, ಕುಟುಂಬಸ್ಥರು ಆತಂಕದಲ್ಲಿದ್ದಾರೆ.




























