
ಕಮಲನಗರ:ಜೂ.19: ಯಾರಿಗೆ ರಾಷ್ಟ್ರಿಕೃತ ಬ್ಯಾಂಕ್‍ಗಳು ಸಾಲ ನೀಡುವುದಿಲ್ಲವೋ, ಅಂತಹ ಅಗತ್ಯವುಳ್ಳವರಿಗೆ ಯಾವುದೇ ಗ್ಯಾರಂಟಿಯಿಲ್ಲದೇ ಡಾ.ಚನ್ನಬಸವಪಟ್ಟದ್ದೇವರ ಬ್ಯಾಂಕ್ ಸಾಲ ನೀಡಲಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ದಾನಾ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘದ ನೂತನ ಶಾಖೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬುಟ್ಟಿ ನೇಯುವವರಿಗೆ, ಚಪ್ಪಲಿ ಹೊಲಿಯುವವರಿಗೆ, ಕ್ಷೌರಿಕರಿಗೆ, ಸಣ್ಣ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ದೊಡ್ಡ ಬ್ಯಾಂಕ್‍ಗಳು ಸಾಲ ನೀಡುವುದಿಲ್ಲ. ಅಂಥವರನ್ನು ಗುರುತಿಸಿ ಪ್ರಥಮ ಆದ್ಯತೆ ಮೇರೆಗೆ ಪಟ್ಟದ್ದೇವರ ಬ್ಯಾಂಕ್ ಸಾಲ ನೀಡಲಿದೆ ಎಂದರು.
ದಿವ್ಯ ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‍ಗಳ ಪಾತ್ರ ಹಿರಿದು. ವ್ಯಾಪಾರಿಗಳ ಅನ್ನದಾತರ ಸೇರಿದಂತೆ ಜನ ಸಾಮಾನ್ಯರ ಆರ್ಥಿಕ ಬೆಳವಣಿಗೆಗೆ ಡಾ.ಚನ್ನಬಸವ ಪಟ್ಟದ್ದೇವರ ಬ್ಯಾಂಕ್ ಸದಾ ಸಿದ್ಧವಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ಡಿ.ಕೆ ಸಿದ್ರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 19 ವರ್ಷಗಳಲ್ಲಿ ಬ್ಯಾಂಕ್ ನೂರಾರು ಕೋಟಿ ವಹಿವಾಟು ಮಾಡಿದೆ. ಭಾಲ್ಕಿ, ಔರಾದ್, ಬೀದರ್‍ನಲ್ಲಿ ಹತ್ತಾರು ಕೋಟಿ ಉಳಿತಾಯ ಠೇವಣಿ ಇರಿಸಲಾಗಿದೆ. ಕೋಟ್ಯಾಂತರ ರೂಪಾಯಿ ಸಾಲ ನೀಡಲಾಗಿದ್ದು, ಶೇ.99ರಷ್ಟು ವಸೂಲಿ ಮಾಡಿದ ಜಿಲ್ಲೆಯ ಚೊಚ್ಚಲ ಬ್ಯಾಂಕ್ ಎಂಬ ಹೆಸರು ಗಳಿಸಿದೆ ಎಂದರು.
ಬ್ಯಾಂಕ್‍ನ ಸಿಇಒ ಗಣಪತಿ ಬಾವಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಜೈರಾಜ ಖಂಡ್ರೆ, ರಾಜಶೇಖರ ಅಷ್ಟೂರೆ, ಶರದ ಸಿರ್ಸೆ, ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಪ್ರಕಾಶ ಘೂಳೆ, ತಮ್ಮಣ್ಣ ದೇಗಲವಾಡೆ, ಮನ್ಮಥಪ್ಪ ಬಿರಾದಾರ, ರೇಖಾ ಮಹಾಜನ, ಅನಿಲಕುಮಾರ ಹಾಲಕುಡೆ, ಶರಣಪ್ಪ ಬಿರಾದಾರ, ಸುರೇಶ ಸೊಲ್ಲಾಪುರೆ, ರಾಜಕುಮಾರ ಬಿರಾದಾರ, ಪ್ರಶಾಂತ ಮಠಪತಿ, ಅಶೋಕ ಪಾಟೀಲ್, ಗುರುಶಾಂತ ಶಿವಣಕರ, ಚನ್ನಬಸವ ಘಾಳೆ, ಅವಿನಾಶ ಶಿವಣಕರ, ಕಲ್ಲೇಶ ಉದಗಿರೆ, ಡಾ.ವಿಶ್ವನಾಥ ಚಿಕಮುರ್ಗೆ ಇತರರಿದ್ದರು.
ವಿರಣ್ಣ ಕುಂಬಾರ ಸ್ವಾಗತಿಸಿದರು. ಜಗನ್ನಾಥ ಚಿಟಮೆ ವಂದಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.