Home Lead News ಹೋಟೆಲ್, ಕೈಗಾರಿಕೆಗೆ ಗ್ಯಾಸ್ ಟ್ರಬಲ್

ಹೋಟೆಲ್, ಕೈಗಾರಿಕೆಗೆ ಗ್ಯಾಸ್ ಟ್ರಬಲ್

ಗ್ರಾಹಕರಿಗೆ ದರ ಏರಿಕೆ ಬಿಸಿ

ಬೆಂಗಳೂರು, ಮಾ. ೧೩- ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಎಲ್‌ಪಿಜಿ ಸರಬರಾಜಿನಲ್ಲಿ ಬವಣೆ ತಪ್ಪಿಲ್ಲ. ಹೋಟೆಲ್‌ಗಳು ಪಿಜಿ ಹಾಸ್ಟೆಲ್‌ಗಳು, ಶಾಲಾ ಮಕ್ಕಳಿಗೆ ಬಿಸಿಯೂಟ ಮತ್ತು ಕೈಗಾರಿಕೆಗಳಿಗೂ ವಾಣಿಜ್ಯ ಬಳಕೆಯ ಗ್ಯಾಸ್ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳ ಉದ್ಯಮಿಗಳು ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.


ಈಗಾಗಲೇ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಭಾರಿ ಪ್ರಮಾಣದಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ನಲುಗಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕವೂ ಎದುರಾಗಿದೆ. ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್, ಬಸವನಗುಡಿ, ಮಲ್ಲೇಶ್ವರಂ, ರಾಜಾಜಿನಗರ ಸೇರಿದಂತೆ ಪ್ರಮುಖ ನಗರಗಳ ಪ್ರದೇಶದಲ್ಲಿ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಹೋಟೆಲ್ ಊಟವನ್ನೇ ನಂಬಿಕೊಂಡಿರುವ ಗ್ರಾಹಕರಿಗೂ ಸಂಕಷ್ಟ ಎದುರಾಗಿದೆ.


ಕೈಗಾರಿಕಾ ವಲಯಕ್ಕೆ ಹೊಡೆತ


ಬೆಂಗಳೂರಿನಲ್ಲಿ ಗ್ಯಾಸ್ ಅಭಾವ ತಲೆದೋರಿರುವ ಬೆನ್ನಲ್ಲೇ ಕೈಗಾರಿಕಾ ವಲಯಕ್ಕೂ ಹೊಡೆತ ಬಿದ್ದಿದೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪೂರೈಕೆಯಾಗುತ್ತಿದ್ದ ಇಂಡಸ್ಟ್ರಿಯಲ್ ಗ್ಯಾಸ್ ಕೊರತೆ ಉಂಟಾಗಿರುವುದೇ ಇದಕ್ಕೆ ಕಾರಣ.


ಪೀಣ್ಯದಲ್ಲಿರುವ ಈ ಕೈಗಾರಿಕಾ ಪ್ರದೇಶ ದಕ್ಷಿಣ ಏಷ್ಯಾದಲ್ಲಿ ಅತಂತ್ಯ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಖ್ಯಾತಿ ಪಡೆದಿದೆ. ಈ ಪ್ರದೇಶದಲ್ಲಿರುವ ಬಹುತೇಕ ಕೈಗಾರಿಕೆಗಳು ಇಂಡಸ್ಟ್ರಿಯಲ್ ಗ್ಯಾಸ್ ಅನ್ನು ಪ್ರಮುಖವಾಗಿ ಅವಲಂಬಿಸಿದೆ.


ವಿಶೇಷವಾಗಿ ಮೆಟಲ್ ಕಟಿಂಗ್, ವೆಲ್ಡಿಂಗ್ ಸೇರಿದಂತೆ ಹಲವು ಉತ್ಪಾದನಾ ಕಾರ್ಯಗಳಿಗೆ ಈ ಗ್ಯಾಸ್ ಅಗತ್ಯವಾಗಿದೆ.


ಈ ನಡುವೆ ಇಂಡಸ್ಟ್ರಿಯಲ್ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಕೈಗಾರಿಕಾ ಚಟುವಟಿಕೆಗಳಿಗೆ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಗ್ಯಾಸ್ ಪೂರೈಕೆ ಸರಿಯಾಗದಿದ್ದರೆ ಸುಮಾರು ೬ ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಬಂದ್ ಆಗುರ ಸಾಧ್ಯತೆಯಿದೆ.


ಈ ಬಗ್ಗೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ದಾನಪ್ಪ ಮಾತನಾಡಿ, ಪೀಣ್ಯದಲ್ಲಿ ಒಟ್ಟು ೧೨ ಸಾವಿರಕ್ಕೂ ಅಧಿಕ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಬಹುತೇಕ ಕೈಗಾರಿಕೆಗಳು ಇಂಡಸ್ಟ್ರಿಯಲ್ ಗ್ಯಾಸ್ ಮೇಲೆ ಅವಲಂಬಿತವಾಗಿವೆ ಎಂದು ತಿಳಿಸಿದ್ದಾರೆ.


ಗ್ಯಾಸ್ ಕೊರತೆ ಮುಂದುವರೆದರೆ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸಾವಿರಾರು ಕಾರ್ಮಿಕರ ಉದ್ಯೋಗಕ್ಕೂ ಕುತ್ತು ಬೀಳಲಿದೆ.


ಇದೇ ಸಮಸ್ಯೆ ಇತರೆ ರಾಜ್ಯಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಕರ್ನಾಟಕದಲ್ಲಿ ಮಾತ್ರ ಏಕೆ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂಬ ಪ್ರಶ್ನೆಯನ್ನು ಕೈಗಾರಿಕೋದ್ಯಮಿಗಳು ಎತ್ತಿದ್ದಾರೆ.


ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಪೀಣ್ಯ ಕೈಗಾರಿಕಾ ಸಂಘ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಗ್ಯಾಸ್ ಪೂರೈಕೆ ಸರಿಪಡಿಸಬೇಕೆಂದು ಒತ್ತಾಯಿಸಿದೆ.

ಶೇ. ೩೦ ರಷ್ಟು ಹೋಟೆಲ್‌ಗಳು ಬಂದ್


ಬೆಂಗಳೂರಿನಲ್ಲಿ ಎಲ್ ಪಿಜಿ ಕೊರತೆಯಿಂದಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಬಂದ್ ಆಗಿವೆ. ಇದರಿಂದಾಗಿ ಕಾರ್ಮಿಕರು ಕೂಡ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಶೇ. ೩೦ ರಷ್ಟು ದರ್ಶಿನಿ ಹೋಟೆಲ್‌ಗಳು ಬಂದ್ ಆಗಿವೆ. ಕೆಲವು ಹೋಟೆಲ್‌ಗಳು ದಿನನಿತ್ಯ ತಯಾರಿಸುವ ಅಡುಗೆ ಪದಾರ್ಥಗಳ ಪಟ್ಟಿ ಸಂಖ್ಯೆಯನ್ನು ಕಡಿತ ಮಾಡಿದೆ. ಸಿಲಿಂಡರ್ ಕೊರತೆ ಪರಿಣಾಮ ಹೋಟೆಲ್‌ಗಳಲ್ಲಿ ತಿಂಡಿ ತಿನಿಸು ದರವೂ ದುಬಾರಿಯಾಗಿದೆ. ಕೆಲವು ಹೋಟೆಲ್‌ಗಳಲ್ಲಿ ಸೌದೆ ಒಲೆಯಲ್ಲಿ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಸೌದೆಗಳಿಗೆ ಇನ್ನಿಲ್ಲದ ಬೇಡಿಕೆ ಕಂಡು ಬಂದಿದೆ. ಮತ್ತೇ ಹೋಟೆಲ್‌ಗಳಲ್ಲಿ ಇಂಡಕ್ಷನ್ ಸ್ಟೌವ್‌ಗೆ ಮೊರೆ ಹೋಗಿದ್ದಾರೆ.


ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ವೆಡ್ಲಿಂಗ್, ಪೌಡರ್ ಕೊಟಿಂಗ್, ಆಹಾರ ಸಂಸ್ಕರಣ ಹಾಗೂ ಔಷಧಿಯ ಉತ್ಪಾದನೆಗೆಳಿಗೆ ಸಿಲಿಂಡರ್‌ಗಳನ್ನೇ ಅವಲಂಭಿಸಿದೆ. ಈಗ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ನಡೆಯುತ್ತಿರುವುದರಿಂದ ಕೈಗಾರಿಕೆಗಳ ದಿನನಿತ್ಯದ ಕೆಲಸಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಐಟಿ ಕಂಪನಿಗಳು ವರ್ಕ್ ಫರ್ಮ್ ಹೋಂಗೆ ಅವಕಾಶ ನೀಡುವ ಬಗ್ಗೆಯೂ ಚಿಂತನೆ ನಡೆಸಿವೆ.

ಗ್ರಾಹಕರ ಆಕ್ರೋಶ


ವಾಣಿಜ್ಯ ಬಳಕೆ ಎಲ್‌ಪಿಜಿ ಅಭಾವದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹೋಟೆಲ್‌ಗಳು ಆಹಾರ ಪದಾರ್ಥಗಳ ದರವನ್ನು ಏರಿಕೆ ಮಾಡಿರುವ ಬಗ್ಗೆ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಲೋಟ ಕಾಫಿಗೆ ೫ ರೂಪಾಯಿಗೆ ಏರಿಕೆಯಾಗಿದೆ.


ಕಾಫಿ, ಟೀ ಸೇರಿದಂತೆ ಇತರ ಪದಾರ್ಥಗಳ ದರ ದಿಢೀರ್ ಏರಿಕೆಯಾಗಿದೆ ಎಂದು ಗ್ರಾಹಕರು ಹೋಟೆಲ್ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಘಟನೆಗಳು ನಡೆದಿವೆ.
ಬೆಳಗ್ಗೆ ೬ ಗಂಟೆಗೆ ತೆರೆಯುತ್ತಿದ್ದ ಹೋಟೆಲ್ ಬೆಳಿಗ್ಗೆ ೧೦ ಗಂಟೆಗೆ ತೆರೆಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಗತ್ಯ ತಿಂಡಿ, ಕಾಫಿ, ಟೀ ಮಾರಾಟ ಮಾಡುತ್ತಿದ್ದೇವೆ ಎಂದು ಹೋಟೆಲ್ ಮಾಲೀಕರು ಸ್ಪಷ್ಟನೆ ಕೊಟ್ಟಿದ್ದಾರೆ.

ದೇಶದಲ್ಲಿ ಅಡುಗೆ ಅನಿಲ ಕೊರತೆ


ಪಶ್ಚಿಮ ಏಷ್ಯಾ ಸಂಘರ್ಷಗಳಿಂದ ಜಾಗತಿಕ ಇಂಧನ ಹರಿವಿಗೆ ಅಡ್ಡಿಯಾಗಿರುವ ನಡುವೆ ದೇಶದಲ್ಲಿ ಅಡುಗೆ ಅನಿಲ ಕೊರತೆಯ ಭೀತಿ ಎದುರಾಗಿದೆ.

ಈ ನಡುವೆ ಮಧ್ಯಪ್ರದೇಶದ ವಿವಿಧೆಡೆ ದಾಳಿ ಮಾಡಿದ ರಾಜ್ಯ ಸರ್ಕಾರದ ಅಧಿಕಾರಿಗಳು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ೩೮ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿರುವ ಘಟನೆ ಛತ್ತರ್‍ಪುರ ಜಿಲ್ಲೆಯಲ್ಲಿ ನಡೆದಿದೆ

ಕೇಂದ್ರ ಸರ್ಕಾರ, ದೇಶಾದ್ಯಂತ ಹೇರಳವಾಗಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಎಲ್‌ಪಿಜಿಯನ್ನು ಒತ್ತಾಯಿಸುತ್ತಿದ್ದರೂ, ಮಧ್ಯಪ್ರದೇಶದ ಎಲ್‌ಪಿಜಿ ಔಟ್‌ಲೆಟ್‌ಗಳ ಹೊರಗೆ ಉದ್ದನೆಯ ಸಾಲುಗಳು ಎದ್ದು ಕಂಡುಬಂದಿದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎಲ್ ಪಿಜಿ ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ

ಉತ್ತರ ಪ್ರದೇಶದ ಬಳಿಯ ಬುಂದೇಲ್‌ಖಂಡ್ ಪ್ರದೇಶದಲ್ಲಿ ಎರಡು ದಿನಗಳ ದಾಳಿಯಲ್ಲಿ ಮಧ್ಯಪ್ರದೇಶದ ಛತ್ತರ್‍ಪುರ ಜಿಲ್ಲೆಯ ಅಧಿಕಾರಿಗಳು ೩೮ ದೇಶೀಯ ಎಲ್‌ಪಿಜಿ ಸಿಲಿಂಡರ್‍ಗಳನ್ನು ವಶಪಡಿಸಿಕೊಂಡಿದ್ದಾರೆ

ಪಶ್ಚಿಮ ಏಷ್ಯಾ ಸಂಘರ್ಷಗಳಿಗೆ ಸಂಬಂಧಿಸಿದ ಅಡುಗೆ ಅನಿಲ ಕೊರತೆಯು ಜಾಗತಿಕ ಪೂರೈಕೆಗೆ ಅಡ್ಡಿಪಡಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಎಲ್‌ಪಿಜಿ ಏಜೆನ್ಸಿಗಳಲ್ಲಿ ದೀರ್ಘ ಸರತಿ ಸಾಲುಗಳು ಕಂಡುಬಂದವು. ದೇಶಾದ್ಯಂತ ಸಾಕಷ್ಟು ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಎಲ್‌ಪಿಜಿ ದಾಸ್ತಾನುಗಳ ಬಗ್ಗೆ ಕೇಂದ್ರ ಸರ್ಕಾರದ ಭರವಸೆಗಳ ಹೊರತಾಗಿಯೂ, ಜಿಲ್ಲಾಡಳಿತ ಕಪ್ಪು ಮಾರುಕಟ್ಟೆ, ಅಕ್ರಮ ಸಂಗ್ರಹಣೆ ಮತ್ತು ಗೃಹಬಳಕೆಯ ಸಿಲಿಂಡರ್‌ಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ.

ನೌಗಾಂಗ್ ಪ್ರದೇಶದ ಬಿಲ್ಹಾರಿ ಗ್ರಾಮದಲ್ಲಿರುವ ನೀರಿನ ಸ್ಥಾವರದ ಮೇಲೆ ಕಂದಾಯ ಮತ್ತು ಆಹಾರ ಇಲಾಖೆಯ ಜಂಟಿ ತಂಡ ದಾಳಿ ನಡೆಸಿ, ವಾಣಿಜ್ಯ ವ್ಯಾಪಾರಕ್ಕಾಗಿ ಅಕ್ರಮವಾಗಿ ಸಂಗ್ರಹಿಸಲಾದ ೧೩ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದೆ.

ಜಿಲ್ಲಾ ಉಸ್ತುವಾರಿ ಜಿಲ್ಲಾಧಿಕಾರಿ ನಮ ಶಿವಯ್ ಅರ್ಜರಿಯಾ ಅವರ ನಿರ್ದೇಶನದ ಮೇರೆಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜಿ.ಎಸ್. ಪಟೇಲ್ ನೇತೃತ್ವದಲ್ಲಿ, ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

೧೦ ದಿನಗಳಲ್ಲಿ ಪರಿಹಾರ:ಕೆಎಚ್‌ಎಂ

ಹೋಟೆಲ್‌ಗಳಿಗೆ ವಾಣಿಜ್ಯ ಸಿಲಿಂಡರ್ ಗಳ ಕೊರತೆಯು ಒಂದು ವಾರ ಇಲ್ಲವೇ ೧೦ ದಿನಗಳವರೆಗೆ ಉಂಟಾಗಬಹುದು. ಅಲ್ಲಿವರೆಗೂ ಹೋಟೆಲ್‌ಗಳು ಸಹಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಮುನಿಯಪ್ಪ ಮೇಲ್ಮನೆಯಲ್ಲಿ ಇಂದು ತಿಳಿಸಿದ್ದಾರೆ.


ರಾಜ್ಯದಲ್ಲಿ ಸಿಲಿಂಡರ್ ಗಳ ಸಮಸ್ಯೆ ಬಗ್ಗೆ ಕಾಂಗ್ರೆಸ್ ಸದಸ್ಯರಾದ ಐವಾನ್ ಡಿಸೋಜ ಮತ್ತು ನಾಗರಾಜ್ ಯಾದವ್ ಅವರು ಶೂನ್ಯ ವೇಳೆ ಮಾಡಿದ ಪ್ರಸ್ತಾಪಕ್ಕೆ ಸಚಿವರು ಉತ್ತರ ನೀಡಿದರು.


ಆಟೋ, ಹೋಟೆಲ್‌ಗಳಿಗೆ ಸಿಲಿಂಡರ್ ದೊರೆಯುತ್ತಿಲ್ಲ. ಗ್ಯಾಸ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೋಟೆಲ್‌ನಲ್ಲಿ ತಿಂಡಿ, ಊಟ ಸಮಸ್ಯೆ ಉಂಟಾಗಿದೆ. ಗ್ಯಾಸ್ ರೇಟ್ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸುದ್ದಿಯಾಗುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಸದಸ್ಯರು ಸದನದ ಗಮನ ಸೆಳೆದರು.


ವಿಶ್ವವಿದ್ಯಾಲಯಗಳಲ್ಲಿ ಗ್ಯಾಸ್‌ನಿಂದ ಊಟ ಕೊಡಲು ಆಗುತ್ತಿಲ್ಲ, ಹೀಗಾಗಿ- ಸಿಲಯ ಸಮಸ್ಯೆಗೆ ಪರಿಹಾರ ದೊರೆಯುವವರೆಗೆ ವಿವಿಗಳಿಗೆ ರಜೆ ಕೊಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇಂದಿರಾ ಕ್ಯಾಂಟೀನ್, ಆಸ್ಪತ್ರೆಗಳಲ್ಲಿ ಸಮಸ್ಯೆ ಆಗಿದೆ. ಮದುವೆಗಳು ನಿಂತಿವೆ. ದೇವಸ್ಥಾನದಲ್ಲಿ ಪ್ರಸಾದಕ್ಕೂ ತೊಂದರೆಯಾಗಿದೆ,ರಾಜ್ಯ ಸರ್ಕಾರ ಸಿಲ ಸಮಸ್ಯೆ ನಿವಾರಣೆಗಸ ಮುಂದಾಗಬೇಕು ಎಂದು ಒತ್ತಾಯಿಸಿದರು.


ಇದಕ್ಕೆ ಸಚಿವ ಮುನಿಯಪ್ಪ ಉತ್ತರ ನೀಡಿ, ಇಂದು ಕೂಡ ಆಯಿಲ್ ಕಂಪನಿ ಜೊತೆ ಮಾತುಕತೆ ನಡೆಸಿದ್ದೇನೆ. ಆಸ್ಪತ್ರೆ, ಹಾಸ್ಟೆಲ್, ವಸತಿ ನಿಲಯಕ್ಕೆ ಕಮರ್ಷಿಯಲ್ ಸಿಲಿಂಡರ್ ಕೊಡುತ್ತೇವೆ, ತಕ್ಷಣಕ್ಕೆ ಸಮಸ್ಯೆ ಆಗಿದೆ. ಒಂದು ವಾರದಲ್ಲಿ ಸಮಸ್ಯೆ ಪರಿಹಾರ ಆಗಲಿದೆ. ಹೋಟೆಲ್ ಅವರಿಗೆ ಎಲೆಕ್ಟ್ರಿಕ್ ಸ್ಟೌವ್ ಬಳಕೆ ಮಾಡಿ ಎಂದು ಮನವಿ ಮಾಡಿದ್ದೇವೆ. ಹೋಟೆಲ್ ಅವರು ಒಂದು ವಾರ ಸಹಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.


ಈಗಾಗಲೇ ಎರಡು ಹಡಗುಗಳು ದೇಶಕ್ಕೆ ಬಂದಿದೆ. ಮತ್ತೆ ೧೦-೧೨ ಹಡಗು ಬರುವ ಸಾಧ್ಯತೆ ಇದೆ. ಆಗ ಸಮಸ್ಯೆ ಸರಿ ಆಗುತ್ತದೆ. ಕಾಳಸಂತೆ ಮಾರಾಟದ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆಗೆ ಸೂಚನೆ ಕೊಡಲಾಗಿದೆ. ಡಿಜಿ ಅವರಿಗೆ ಸೂಚನೆ ಕೊಡಲಾಗಿದೆ. ಕಮರ್ಷಿಯಲ್ ಗ್ಯಾಸ್‌ಗೆ ಒಂದು ವಾರ ಅಥವಾ ೧೦ ದಿನ ಸಮಸ್ಯೆ ಆಗುತ್ತದೆ. ಸ್ಟಾಕ್ ಇಲ್ಲ ಸಹಿಸಿಕೊಳ್ಳಬೇಕು. ಆಟೋಗಳಿಗೆ ಗ್ಯಾಸ್ ಅವಕಾಶ ಮಾಡಿಕೊಡಲು ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.