Home ಮುಖಪುಟ ಸುದ್ದಿ ಗ್ಯಾಸ್ ಸಿಲಿಂಡರ್ ಅಭಾವ ವೆಲ್ಡಿಂಗ್ ಅಂಗಡಿಗಳು ಬಂದ್

ಗ್ಯಾಸ್ ಸಿಲಿಂಡರ್ ಅಭಾವ ವೆಲ್ಡಿಂಗ್ ಅಂಗಡಿಗಳು ಬಂದ್

ಬೆಂಗಳೂರು,ಮಾ.೧೭-ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿ ಪರಿಣಾಮ ರಾಜ್ಯದಲ್ಲೂ ಗ್ಯಾಸ್ ಸಿಲಿಂಡರ್ ಕೊರತೆ ತಟ್ಟಿದ್ದು, ಇದರಿಂದ ಹಲವಾರು ವ್ಯಾಪಾರಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಾಗಲೇ ಗ್ಯಾಸ್ ಕೊರತೆಯಿಂದ ಹಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದರೆ, ಇದೀಗ ಗ್ಯಾಸ್ ಸಿಲಿಂಡರ್ ಮೇಲೆ ಸಂಪೂರ್ಣ ಅವಲಂಬಿತವಾಗಿರುವ ವೆಲ್ಡಿಂಗ್ ಅಂಗಡಿಗಳಿಗೂ ದೊಡ್ಡ ಹೊಡೆತ ಬಿದ್ದಿದೆ.


ನಗರದ ಬಹುತೇಕ ವೆಲ್ಡಿಂಗ್ ಅಂಗಡಿಗಳು ಕಳೆದ ಸುಮಾರು ೧೦ ದಿನಗಳಿಂದ ಗ್ಯಾಸ್ ಸಿಲಿಂಡರ್ ಸಿಗದೆ ಬಂದ್ ಆಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್‌ಗಳಿಗೆ ಪರ್ಯಾಯವಾಗಿ ಸೌದೆ ಅಥವಾ ಎಲೆಕ್ಟ್ರಿಕ್ ಸ್ಟೋವ್ ಮೂಲಕ ಅಡುಗೆ ಮಾಡುವ ಅವಕಾಶ ಇದ್ದರೂ, ವೆಲ್ಡಿಂಗ್ ಅಂಗಡಿಗಳಿಗೆ ಅಂತಹ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಸಂಪೂರ್ಣವಾಗಿ ಕಾರ್ಯ ನಿಲ್ಲಿಸುವಂತಾಗಿದೆ.


ಮುಖ್ಯವಾಗಿ ಆಟೋ, ಕಾರು, ಲಾರಿ ಸೇರಿದಂತೆ ವಿವಿಧ ವಾಹನಗಳ ಬಿಡಿಭಾಗಗಳನ್ನು ಜೋಡಿಸಲು ವೆಲ್ಡಿಂಗ್ ಅತ್ಯಗತ್ಯವಾಗಿದೆ. ಅಪಘಾತಕ್ಕೊಳಗಾದ ವಾಹನಗಳ ಚಾಸಿಸ್, ಸ್ಟೀರಿಂಗ್ ರಾಡ್ ಸೇರಿದಂತೆ ಹಲವಾರು ಭಾಗಗಳ ಮರುಜೋಡಣೆಗೆ ಗ್ಯಾಸ್ ವೆಲ್ಡಿಂಗ್ ಅಗತ್ಯವಿದ್ದು, ಸಿಲಿಂಡರ್ ಕೊರತೆಯಿಂದ ಈ ಕೆಲಸಗಳು ಸ್ಥಗಿತಗೊಂಡಿವೆ.ಇನ್ನೂ ಹೊಸ ವಾಹನಗಳ ಬಾಡಿ ಬಿಲ್ಡ್ ಗೆ ಗ್ಯಾಸ್ ಸಿಲಿಂಡರ್ ಅವಶ್ಯವಾಗಿ ಬೇಕಿದೆ.

ಅದರೆ ನಗರದ ಕಲಾಸಿಪಾಳ್ಯ, ಶಿವಾಜಿನಗರ, ಗೌರಿಪಾಳ್ಯ ಸೇರಿದಂತೆ ಹಲವೆಡೆ ವೆಲ್ಡಿಂಗ್ ಅಂಗಡಿಗಳು ಮುಚ್ಚಿರುವುದರಿಂದ ಅಪಘಾತಗೊಂಡ ವಾಹನಗಳು ಗ್ಯಾರೇಜ್ ಮುಂದೆ ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ವಾಹನಗಳ ದುರಸ್ತಿ ಸಾಧ್ಯವಾಗದೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತ ಗ್ಯಾಸ್ ಸಿಗದೆ ಅಂಗಡಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿರುವುದರಿಂದ ವೆಲ್ಡಿಂಗ್ ಅಂಗಡಿ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. “ಗ್ಯಾಸ್ ಸಿಲಿಂಡರ್ ಸಿಗದೆ ಕೆಲಸವೇ ಇಲ್ಲದಂತಾಗಿದೆ. ದಿನಗೂಲಿ ಮೇಲೆ ಬದುಕುವ ನಮಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ” ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.


ಗ್ಯಾಸ್ ಸರಬರಾಜು ಶೀಘ್ರದಲ್ಲೇ ಸರಿಯಾಗದಿದ್ದರೆ ವಾಹನ ದುರಸ್ತಿ ಉದ್ಯಮ ಸೇರಿದಂತೆ ಹಲವಾರು ಸಣ್ಣ ವ್ಯಾಪಾರಗಳ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.