ಕಾರ್ಗಿಲ್‍ನಿಂದ ಸಿಂಧೂರವರೆಗೆಶಹೀದ್ ಅಮರಗಾಥೆ 29ರಂದು

ಬೀದರ್: ಜೂ.19:ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಯೋಧ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ಶಹೀದ್ (ಹುತಾತ್ಮ) ದಿನಾಚರಣೆ ನಿಮಿತ್ತ ಇದೇ 29ರಂದು ಸಂಜೆ 5ಕ್ಕೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ “ಕಾರ್ಗಿಲ್‍ನಿಂದ ಸಿಂಧೂರವರೆಗೆ-ಕ್ಯಾಪ್ಟನ್ ವಿಜಯಂತ್ ಥಾಪರ್ ಮತ್ತು ಹುತಾತ್ಮರ ಅಮರಗಾಥೆ” ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ವತಿಯಿಂದ ದೇಶಭಕ್ತಿ ಬಿಂಬಿಸುವ, ರಾಷ್ಟ್ರಪರ ಚಿಂತನ-ಮಂಥನಕ್ಕೆ ವೇದಿಕೆ ಒದಗಿಸುವ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಹುತಾತ್ಮರನ್ನು ಸ್ಮರಿಸುವ ಜೊತೆಗೆ ಇತ್ತೀಚೆಗೆ ಪಹಲ್ಗಾಮ್ ಉಗ್ರರ ದಾಳಿ ನಂತರ ಭಾರತ ಸರ್ಕಾರ ನಡೆಸಿರುವ ಯಶಸ್ವಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಿಮಿತ್ತ ಕಾರ್ಯಕ್ರಮ ನಡೆಯಲಿದ್ದು, ಇದರ ಯಶಸ್ಸಿಗಾಗಿ ಸಮಿತಿ ಪ್ರಾಂತ ಕಾರ್ಯಾಧ್ಯಕ್ಷ ಡಾ.ಶಿವಕುಮಾರ ಉಪ್ಪೆ ನೇತೃತ್ವದಲ್ಲಿ ಜಿಲ್ಲಾ ತಂಡ ಭರ್ಜರಿ ಸಿದ್ಧತೆ ನಡೆಸಿದೆ.
ಪಂಜಾಬ್ ಮೂಲದ ವಿಜಯಂತ್ ಥಾಪರ್ ಅವರು ಸೇನಾ ಅಕಾಡೆಮಿಯಲ್ಲಿ ಪದವಿ ಮುಗಿಸಿದ ಬಳಿಕ ಡಿಸೆಂಬರ್ 1998ರಲ್ಲಿ ಭಾರತೀಯ ಸೈನ್ಯದಲ್ಲಿ ಕ್ಯಾಪ್ಟನ್ ಆಗಿ ರಜಪುತಾನಾ ರೈಫಲ್ಸ್ ಸೇರಿದರು. ಕೇವಲ 22ನೇ ವಯಸ್ಸಿನಲ್ಲಿ ವಿಜಯಂತ್ ಅವರು 1999ರ ಜೂನ್ 29ರಂದು ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದರು. ಭಾರತೀಯ ಸೈನ್ಯದಲ್ಲಿ ವಿಜಯಂತ್ ಅವರ ಇಡೀ ಪರಿವಾರವೇ ಸರ್ವಸ್ವ ತ್ಯಾಗ ಮಾಡಿ ದೇಶ ಸೇವೆಯಲ್ಲಿದೆ. ವಿಜಯಂತ್ ಅವರ ಹುತಾತ್ಮ ದಿನದಂದು ಅವರಿಗೆ ಗೌರವಿಸಿ, ನಮಿಸುವ ಜೊತೆಗೆ ಯುವಕರಿಗೆ ಅವರ ಯಶೋಗಾಥೆ ಪ್ರೇರಣೆಯಾಗಬೇಕೆಂಬ ನಿಟ್ಟಿನಲ್ಲಿ ಇತಿಹಾಸ ಸಂಕಲನ ಸಮಿತಿ ಮಹತ್ವದ ಕಾರ್ಯಕ್ರಮ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಹುತಾತ್ಮ ವಿಜಯಂತ್ ಥಾಪರ್ ಅವರ ತಂದೆ ಕರ್ನಲ್ ವಿ.ಎನ್.ಥಾಪರ್, ತಾಯಿ ತೃಪ್ತಿ ಥಾಪರ್ ಪಾಲ್ಗೊಂಡು ಗೌರವ ಸನ್ಮಾನ ಸ್ವೀಕರಿಸುವ ಜೊತೆಗೆ ಪುತ್ರನ ಹಾಗೂ ದೇಶಕ್ಕಾಗಿ ಹುತಾತ್ಮರಾದ ವೀರ ಸೈನಿಕರ ಅಮರಗಾಥೆ ಮೇಲೆ ಮೆಲಕು ಹಾಕಲಿದ್ದಾರೆ. ವಿಶ್ವ ಹಿಂದು ಪರಿಷತ್ ಕೇಂದ್ರೀಯ ಸಮಿತಿ ಸಹ ಕಾರ್ಯದರ್ಶಿ, ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣದ ಉಸ್ತುವಾರಿಗಳಾದ ಕನ್ನಡಿಗ ಎನ್.ಗೋಪಾಲ್ ಅವರು ದೇಶ ರಕ್ಷಣೆಯಲ್ಲಿ ಯುವಕರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅನೇಕ ಮಾಜಿ ಸೈನಿಕರು, ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ರಾಷ್ಟ್ರ ರಕ್ಷಣೆಗೆ ಹುತಾತ್ಮರಾದ ಯೋಧರಿಗೆ ಮತ್ತು ಅವರ ಪರಿವಾರದವರಿಗೆ ಗೌರವಿಸುವ ಅಪರೂಪದ ಕಾರ್ಯಕ್ರಮ ಇದಾಗಿದೆ. ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಆಪÀರೇಷನ್ ಸಿಂಧೂರ ಮೂಲಕ ತಕ್ಕ ಪಾಠ ಕಲಿಸಿದ ವಿಜಯೋತ್ಸವದ ಪರ್ವಕಾಲ ಸಹ ಇದಾಗಿದೆ. ರಾಷ್ಟ್ರಪರ ಚಿಂತನೆ, ರಾಷ್ಟ್ರವಾದಿತನಕ್ಕೆ ಶಕ್ತಿ ತುಂಬಲು ಪೂರಕವಾದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ಪ್ರಕಟಣೆಯಲ್ಲಿ ಕೋರಲಾಗಿದೆ.