
ಬೀದರ್:ಮಾ.೧೫: ತಾಲೂಕಿನ ಅಷ್ಟೂರ ಗ್ರಾಮದಲ್ಲಿ ಅಲ್ಲಮಪ್ರಭುಗಳ ಜಾತ್ರೆ ಅಂಗವಾಗಿ ಅಲ್ಲಮ ಪ್ರಭು ದೇವರ ಜಾತ್ರಾ ಸಮಿತಿ ಅಷ್ಟೂರು, ಎಸ್. ಬಿ. ಪಾಟೀಲ ದಂತ ಮಹಾವಿದ್ಯಾಲಯದ ಆಸ್ಪತ್ರೆ, ಶ್ರೀ ಸಿದ್ಧಾರೂಢ ಆಸ್ಪತ್ರೆ ಹಾಗೂ ಸಂಗA ವೆಲ್ಫೇರ್ ಎಜುಕೇಶನ್ ಸೊಸೈಟಿ, ಬೀದರ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಯಿತು.
ಮಾ.೧೩ರಂದು ನಡೆದ ದಂತ ತಪಾಸಣೆ ಶಿಬಿರವನ್ನು ಪೂಜ್ಯ ಶ್ರೀ ಸೋಮಶೇಖರ ಶಿವರಾಯ ವಡೆಯರ್ ಮಾಡಿಯ್ಯಾಳ್ ಸ್ವಾಮಿಜಿಯವರು ಅಮೃತ ಹಸ್ತದಿಂದ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ ಶಶಿಧರ ಪಾಟೀಲ್, ಉಪಾಧ್ಯಕ್ಷ ಶಿವಕುಮಾರ ನಾಗಲಗಿದ್ದಿ ಹಾಗೂ ಸಂಗA ವೆಲ್ಫೇರ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಓತಿ ಶರಣಪ್ಪ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಂತ ತಜ್ಞರಾದ ಡಾ. ಶಾಹಿದ್, ಡಾ. ಸೈಫ್, ಡಾ. ಮಾಲಿಹಾ, ಡಾ. ನಾಜೇಮಾ ಮತ್ತು ಡಾ. ದಿವ್ಯಜ್ಯೋತಿ ಸೇರಿದಂತೆ ಇತರ ವೈದ್ಯರು ಭಾಗವಹಿಸಿ ಸುಮಾರು ೧೦೦ ರಿಂದ ೧೨೦ ಜನರಿಗೆ ಉಚಿತ ದಂತ ತಪಾಸಣೆ ನಡೆಸಿ ಸೂಕ್ತ ಸಲಹೆ ಹಾಗೂ ಔಷಧೋಪಚಾರ ನೀಡಿದರು.
ಇದೇ ಜಾತ್ರೆ ಅಂಗವಾಗಿ ಮಾ.೧೪ರಂದು ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರವೂ ನಡೆಯಿತು. ಶ್ರೀ ಸಿದ್ಧಾರೂಢ ಆಸ್ಪತ್ರೆ ಯ ವಿವಿಧ ವಿಭಾಗಗಳ ತಜ್ಞ ವೈದ್ಯರಾದ ಡಾ. ಮಲ್ಲಿಕಾರ್ಜುನ, ಡಾ. ವಿನೋದ್, ಡಾ. ಯೋಗೇಶ್ವರಿ, ಡಾ. ಈಶ್ವರಿ ಓತಿ, ಡಾ. ಕೋಮಲ್, ಡಾ. ರೇಣುಕಾ, ಡಾ. ಸುನಂದಾ, ಡಾ. ಸಂಗೀತಾ ಹಾಗೂ ಡಾ. ಪ್ರೀತಿ ಅವರು ಭಾಗವಹಿಸಿ ಸುಮಾರು ೨೦೦ ರಿಂದ ೨೫೦ ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು. ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಶಿಬಿರದಲ್ಲಿ ಮಕ್ಕಳ ತಜ್ಞರಾದ ಡಾ. ರಮೇಶ್ ಓತಿ ಅವರು ಸಹ ಹಾಜರಿದ್ದು ಆರೋಗ್ಯ ಕುರಿತು ಮಾರ್ಗದರ್ಶನ ನೀಡಿದರು. ಜಾತ್ರೆ ಅಂಗವಾಗಿ ಆಯೋಜಿಸಲಾದ ಈ ಆರೋಗ್ಯ ಶಿಬಿರಗಳಿಂದ ಗ್ರಾಮಸ್ಥರು ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನ ಪಡೆದರು.


























