
ತುರುವೇಕೆರೆ, ಅ. ೧೧- ಹಣ ಸಂಪಾದನೆ ಮಾಡಬಹುದು, ಆದರೆ ಆರೋಗ್ಯ ಸಂಪಾದನೆ ಮಾಡುವುದು ಬಹಳ ಕಷ್ಟ ಸಾಧ್ಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್. ಉಮೇಶ್ ಹೇಳಿದರು.
ಪಟ್ಟಣದ ವಾಣಿಜ್ಯ ಸಂಕೀರ್ಣದ ಬಳಿ ರೋಟರಿ ಕ್ಲಬ್ ವತಿಯಿಂದ ಬೀದಿಬದಿ ವ್ಯಾಪಾರಸ್ಥರಿಗೆ, ನಾಗರೀಕರಿಗೆ ಏರ್ಪಡಿಸಿದ್ದ ಉಚಿತ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಿನನಿತ್ಯದ ಜೀವನ ನಿರ್ವಹಣೆಗೆ ಬೀದಿ ಬದಿಯಲ್ಲಿ ಹೂ, ಹಣ್ಣು, ತರಕಾರಿ, ಸೊಪ್ಪು, ಎಲೆ, ಅಡಿಕೆ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವ್ಯಾಪಾರಸ್ಥರಿಗೆ ವಾಹನದ ಹೊಗೆ, ಧೂಳು ಮುಂತಾದವುಗಳ ನಡುವೆ ಸರಿಯಾದ ಸಮಯಕ್ಕೆ ತಿಂಡಿ, ಊಟ ಮಾಡದೆ ಒತ್ತಡದಲ್ಲಿ ಕೆಲಸ ಮಾಡುವ ಕಾರಣ ರಕ್ತದೊತ್ತಡ, ಮಧುಮೇಹ, ಕೆಮ್ಮು, ಜ್ವರ, ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದರೆ ಬದುಕಿನ ಬಂಡಿ ಸಾಗಲೇಬೇಕಿರುವುದರಿಂದ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಪಡುವುದನ್ನು ನಿರ್ಲಕ್ಷಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ, ಕೂಲಿ ಕಾರ್ಮಿಕರಿಗೆ, ಪೌರ ಕಾರ್ಮಿಕರಿಗೆ, ಬೆಳಗ್ಗೆ ವಾಯುವಿಹಾರಕ್ಕೆ ತೆರಳಿ ಬರುವ ನಾಗರೀಕರಿಗೆ ಅನುಕೂಲವಾಗಲೆಂದು ಉಚಿತವಾಗಿ ಬಿಪಿ, ಶುಗರ್ ತಪಾಸಣಾ ಶಿಬಿರವನ್ನು ಸಾರ್ವಜನಿಕ ಸ್ಥಳಗಳಲ್ಲಿ ರೋಟರಿ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಅಂಜನ್ ಕುಮಾರ್, ಪಪಂ ಕಂದಾಯ ನಿರೀಕ್ಷಕ ಪ್ರಶಾಂತ್ ಭದ್ರಣ್ಣನವರ್, ನರಸಿಂಹಮೂರ್ತಿ, ರೋಟರಿ ಕಾರ್ಯದರ್ಶಿ ಸುನಿಲ್, ಖಜಾಂಚಿ ಪ್ರಸನ್ನಕುಮಾರ್, ರೋಟರಿ ಆರೋಗ್ಯಭಾಗ್ಯ ನಿರ್ದೇಶಕ ಅಭಿನೇತ್ರಿ ನರಸಿಂಹಮೂರ್ತಿ, ಸಾ.ಶಿ.ದೇವರಾಜ್, ಸಂತೋಷ್, ಉಪೇಂದ್ರ ಸೇರಿದಂತೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು.