
ಆಳಂದ:ಅ.25: ಕೇಂದ್ರ ಬಸ್ ನಿಲ್ದಾಣದ ಎದುರು ಇರುವ ರಸ್ತೆಯಲ್ಲಿ ಚರಂಡಿ ನೀರು ನಿಂತುಕೊಂಡಿರುವುದರಿಂದ ಭಾರೀ ದುರ್ವಾಸನೆಯಿಂದ ಸುತ್ತಮುತ್ತಲಿನ ಪರಿಸರ ಕಲುಷಿತಗೊಂಡಿದೆ.
ಇದರ ಪರಿಣಾಮವಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹಾದುಹೋಗುವಂತಾಗಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ. ಸಂಬಂಧಪಟ್ಟ ನೈರ್ಮಲ್ಯ ನಿರೀಕ್ಷಕರು ಮತ್ತು ಪುರಸಭೆ ಸದಸ್ಯರು ಈ ಸಮಸ್ಯೆಯತ್ತ ಗಮನ ಹರಿಸದೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಚರಂಡಿ ವ್ಯವಸ್ಥೆಯನ್ನು ಮುಚ್ಚಿ ಹಾಕಿರುವುದರಿಂದ ನೀರು ಸರಿಯಾಗಿ ಹರಿದುಹೋಗದೆ ರಸ್ತೆಯ ಮೇಲೆಯೇ ನಿಂತುಕೊಳ್ಳುತ್ತಿದೆ. ಇದರಿಂದಾಗಿ ದುರ್ವಾಸನೆಯೊಂದಿಗೆ ಕಲುಷಿತ ನೀರು ಹರಡಿ, ಸುತ್ತಮುತ್ತಲಿನ ವ್ಯಾಪಾರಸ್ಥರು, ಪ್ರಯಾಣಿಕರು ಮತ್ತು ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. “ಪ್ರತಿದಿನ ಬಸ್ ನಿಲ್ದಾಣಕ್ಕೆ ಬರುವ ನೂರಾರು ಜನರು ಈ ದುರ್ವಾಸನೆಯಿಂದ ಬಳಲುತ್ತಿದ್ದೇವೆ. ಇದು ಉಸಿರಾಟದ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ” ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಈ ಸಮಸ್ಯೆಯು ಹಲವು ತಿಂಗಳುಗಳಿಂದಲೂ ಇದ್ದರೂ, ಪುರಸಭೆ ಸಂಬಂಧಿತರು ಸಂಬಂಧಿತರು ಯಾವುದೇ ಕ್ರಮ ಕೈಗೊಂಡಿಲ್ಲ. ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ನೀರು ಸರಿಯಾಗಿ ಹರಿಯುವಂತೆ ಮಾಡುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪುರಸಭೆ ಸದಸ್ಯರು ಈ ವಿಷಯದಲ್ಲಿ ಮೌನ ವಹಿಸಿರುವುದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. “ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯಾಗುತ್ತಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯ ವ್ಯಾಪಾರಸ್ಥರು ಹೇಳಿದ್ದಾರೆ.
ಆಳಂದ ಪಟ್ಟಣದ ಕೇಂದ್ರಸ್ಥಳದಲ್ಲಿರುವ ಈ ಅವ್ಯವಸ್ಥೆಯು ಪ್ರಯಾಣಿಕರಿಗೆ ಮಾತ್ರವಲ್ಲದೆ, ಪಟ್ಟಣದ ಸಮಗ್ರ ಚಿತ್ರಣಕ್ಕೂ ಕಳಂಕ ತರುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ, ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಖಾತ್ರಿಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಬಂಡಿ ವ್ಯಾಪಾರಿಗಳು ರಸ್ತೆ ಮೇಲೆ ತಮ್ಮ ತ್ಯಾಜ್ಯ ವಸ್ತುಗಳು ನಿರಂತರವಾಗಿ ಎಸೆಯುತ್ತಿರುವುದು ಮತ್ತು ಕೊಳಚೆ ಸ್ಥಳದಲ್ಲಿ ನಿಂತು ವ್ಯಾಪಾರ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ ಅಲ್ಲದೆ ವ್ಯಾಪಾರಿಗಳಿಗೆ ಸ್ವಚ್ಛತೆ ಬಗ್ಗೆ ಅರಿವಿದ್ದು ಇಲ್ಲದಂತೆ ಕಸವನ್ನು ಬೇಕಾಬಿಟ್ಟಿಯಾಗಿ ಎಸೆಯುತ್ತಿರುವುದು ಚರಂಡಿ ಬರ್ತಿಗೂ ಕಾರಣವಾಗುತ್ತಿದೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ಅವ್ಯವಸ್ಥೆ ದೀಪಾವಳಿ ಹಬ್ಬದ ಮುನ್ನ ವೇ ಶುರುವಾಗಿದ್ದು ವಾರ ಕಳೆದರೂ ಇದುವರೆಗೂ ಚರಂಡಿ ವಿಲೇವಾರಿ ಸಾಗದೆ ಇರುವುದು ವಿಪರ್ಯಾಸವಾಗಿ ಪರಿಣಮಿಸಿದೆ ತಕ್ಷಣಕ್ಕೆ ಸಂಬಂಧಿತರು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಕಾದು ನೋಡುತ್ತಿದ್ದಾರೆ





























