
ಸುರಪುರ: ಮಾ.೮:೧೪ ವರ್ಷ ಮೇಲ್ಪಟ್ಟ ಬಾಲಕಿಯರು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರ ಬಿಡುಗಡೆಗೊಳಿಸಿರುವ ಹೆಚ್ ಪಿ ವಿ ಲಸಿಕೆಯನ್ನು ಎಲ್ಲರೂ ಪಡೆಯಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕೋಶದ ಕ್ಯಾನ್ಸರ್ ಅಪಾಯಕಾರಿಯಾಗಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತೆಗಾಗಿ ಲಸಿಕೆಯನ್ನು ಹೊರ ತಂದಿದ್ದು ಎಲ್ಲಾ ೧೪ ವರ್ಷ ಮೇಲ್ಪಟ್ಟ ಬಾಲಕಿಯರು ಇದನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಸರಕಾರ ಈಗ ನೀಡುತ್ತಿರುವ ಲಸಿಕೆ ತುಂಬಾ ಅಮೂಲ್ಯವಾದದ್ದು. ಬೇರೆ ಲಸಿಕೆಗಳಿಗಿಂತ ಹೆಚ್ಚಿನ ದರದ ಲಸಿಕೆ ಇದಾಗಿದ್ದು, ೧೪ ವರ್ಷ ಮೇಲ್ಪಟ್ಟು ೧೫ ವರ್ಷದ ಒಳಗಿನ ಎಲ್ಲಾ ಬಾಲಕಿಯರಿಗೆ ಇದನ್ನು ನೀಡಲಾಗುತ್ತಿದೆ. ತಾಲೂಕ ಸಾರ್ವಜನಿಕ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕೆ ನೀಡಲಾಗುತ್ತಿದ್ದು ಆಯಾ ಗ್ರಾಮಗಳ ವ್ಯಾಪ್ತಿಯ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆಯುವಂತೆ ತಿಳಿಸಿದರು. ಸುರಪುರ ಹಾಗೂ ಹುಣಸಗಿ ತಾಲೂಕಿನ ಒಟ್ಟು ೪೭೫೦ ಬಾಲಕಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು ಈಗಾಗಲೇ ೩೦೦ ಜನ ಬಾಲಕಿಯರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಪ್ಪ ಕಾಡ್ಲೂರ, ಮುಖಂಡರಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಮಲ್ಲಣ್ಣ ಸಾಹುಕಾರ್ ಮುಧೋಳ, ಅಬ್ದುಲ್ ಗಫರ್ ನಗನೂರಿ, ಶಕೀಲ್ ಅಹ್ಮದ್ ಖುರೇಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಾಲಕಿಯರಿಗೆ ಲಸಿಕೆಯನ್ನು ಕೂಡ ಹಾಕಲಾಯಿತು.




























