Home ಜಿಲ್ಲೆ ಕಲಬುರಗಿ ಏ. 16 ರಿಂದ ಐದುದಿನಗಳ ಬಸವ ಜಯಂತಿ ಉತ್ಸವ

ಏ. 16 ರಿಂದ ಐದುದಿನಗಳ ಬಸವ ಜಯಂತಿ ಉತ್ಸವ

ಕಲಬುರಗಿ,ಏ 8: ಜಿಲ್ಲಾಡಳಿತ ಮತ್ತು ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿವತಿಯಿಂದ 893ನೆಯ ಬಸವ ಜಯಂತಿ ಉತ್ಸವ ಏ. 16 ರಿಂದ 20 ರವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ,ಅಳಂದ ಶಾಸಕ ಹಾಗೂ ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್ ಪಾಟೀಲ ಅವರು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ದಿನಗಳ ಬಸವ ಜಯಂತಿ ಉತ್ಸವ ಕಾರ್ಯಕ್ರಮ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿ ಆವರಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ನಡೆಯಲಿದೆ ಮತ್ತು ಇಷ್ಟಲಿಂಗ ಪೂಜೆ ಕಾರ್ಯಕ್ರಮ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದರು.
ಏ 16 ರಿಂದ 18 ರವರೆಗೆ ಮೂರು ದಿನ ಪ್ರತಿದಿನ ಸಂಜೆ 7 ಗಂಟೆಗೆ ವಿವಿಧ ವಾಗ್ಮಿಗಳಿಂದ ಪ್ರವಚನ ಮತ್ತು ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಇಷ್ಟಲಿಂಗ ಪೂಜೆ :
ಏ.19 ರಂದು ಬೆಳಿಗ್ಗೆ 6.30 ಕ್ಕೆ ಶರಣಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ.ಸಂಜೆ 5 ಕ್ಕೆ ಶರಣಬಸವೇಶ್ವರ ದೇವಸ್ಥಾನದ ಆವರಣದಿಂದ ಮಹಿಳಾ ಬೈಕ್ ರ್ಯಾಲಿ ಆಯೋಜಿಸಲಾಗಿದೆ.ಸಂಜೆ 6 ಕ್ಕೆ ನಡೆಯುವ ಸಮಾರಂಭದಲ್ಲಿ ಅ.ಭಾ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಸನ್ಮಾನಿಸಲಾಗುವದು
ಏ.20 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಬಸವ ಜಯಂತಿ ಉತ್ಸವ ಕಾರ್ಯಕ್ರಮ ನಡೆಯಲಿದೆ ಅಂದು ಸಂಜೆ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರಗೆ ಭವ್ಯ ಶೋಭಾಯಾತ್ರೆ ಜರುಗಲಿದೆ .ಐದೂ ದಿನಗಳ ಸಮಾರಂಭದಲ್ಲಿ ವಿವಿಧ ಪೂಜ್ಯರು, ರಾಜಕೀಯ ಗಣ್ಯರು,ಬಸವ ಚಿಂತಕರು,ಸಾಹಿತಿಗಳು,ಕಲಾವಿದರು,ಅಭಿಮಾನಿಗಳು ಪಾಲ್ಗೊಳ್ಳುವರು.
ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ ಪಾಟೀಲ ಅವರು ವಚನ ಸಾಹಿತ್ಯದ 50 ಸಾವಿರ ಗ್ರಂಥಗಳನ್ನು ಬಸವ ಜಯಂತಿ ಉತ್ಸವ ಸಂದರ್ಭದಲ್ಲಿ ವಿತರಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಜಿ ಪಾಟೀಲ,ಅಮರನಾಥ ಪಾಟೀಲ, ಅಲ್ಲಮಪ್ರಭು ಪಾಟೀಲ,ಅರುಣಕುಮಾರ ಎಂವೈ ಪಾಟೀಲ,ದೊಡ್ಡಪ್ಪಗೌಡ ಪಾಟೀಲ ನರಿಬೋಳ,ಡಾ.ಭೀಮಾಶಂಕರ ಬಿಲಗುಂದಿ,ಶರಣು ಭೂಸನೂರ,ರಾಜಶೇಖರ ಸಿರಿ, ಪ್ರೊ ಆರ್.ಕೆ ಹುಡಗಿ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.