
ಶಿವಮೊಗ್ಗ,ಡಿ.೧೩- ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಲು ಸಹಕರಿಸಿದ್ದಾರೆ ಎಂದು ಭಾವಿಸಿ ವ್ಯಕ್ತಿಯೊಬ್ಬ ಇಬ್ಬರನ್ನು ಚೂರಿಯಿಂದ ಇರಿದು ಜೋಡಿ ಕೊಲೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಭದ್ರಾವತಿಯ ಜೈ ಭೀಮ್ ನಗರದ ಕಿರಣ್(೨೫) ಹಾಗೂ ಪೌರ ಕಾರ್ಮಿಕ ಮಂಜುನಾಥ್(೪೫) ಕೊಲೆಯಾದವರು, ಕೃತ್ಯದ ಸಂಬಂಧ ಸಂಜಯ್, ಶಶಿ, ವೆಂಕಟೇಶ್, ಭರತ್ ಹಾಗೂ ಸುರೇಶ್ ಸೇರಿ ಐವರನ್ನು ಬಂಧಿಸಿರುವುದಾಗಿ ಎಸ್‌ಪಿ ಮಿಥುನ್ ಕುಮಾರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭೀಮ್ ನಗರದ ಪ್ರೇಮಿಗಳಿಬ್ಬರು ಮೊನ್ನೆ ದಿನ ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಹುಡುಗ ಮತ್ತು ಹುಡುಗಿಯ ಎರಡೂ ಕಡೆಯ ಕುಟುಂಬದವರು ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ನಿನ್ನೆ ಸಂಜೆ ಪ್ರೇಮಿಗಳಿಬ್ಬರು ತಮಗೆ ಜೀವ ಬೆದರಿಕೆ ಇದೆ ಎಂದು ಹಳೇ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಆಗ ಜೈ ಭೀಮ್ ನಗರದ ಕಿರಣ್, ಮಂಜುನಾಥ್ ಸೇರಿ ಹಲವರು ಪೊಲೀಸ್ ಠಾಣೆಗೆ ಬಂದು ಪ್ರೇಮಿಗಳಿಬ್ಬರ ಬಳಿ ಮಾತನಾಡುವಾಗ ಹುಡುಗಿಯ ಸಹೋದರ ಬಂದು ನನ್ನ ತಂಗಿಯ ಪ್ರೇಮಕ್ಕೆ ನೀವೆಲ್ಲಾ ಬೆಂಬಲ ನೀಡಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ. ಸ್ಥಳದಲ್ಲಿದ್ದವರು ಗಲಾಟೆ ತಡೆದು ಮನೆಗೆ ಕಳುಹಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಹುಡುಗಿಯ ಸಹೋದರ, ರಾತ್ರಿ ಕಿರಣ್, ಮಂಜುನಾಥ್ ಮನೆಯ ಬಳಿ ಬಂದು ಗಲಾಟೆ ತೆಗೆದಿದ್ದಾನೆ.
ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ನನ್ನ ತಂಗಿ ತನ್ನ ಪ್ರೇಮಿಯ ಜೊತೆ ಓಡಿ ಹೋಗಲು ನೀವೇ ಮುಖ್ಯ ಕಾರಣ ಎಂದು ತಾನು ತಂದಿದ್ದ ಚಾಕುವಿನಿಂದ ಕಿರಣ್ ಹಾಗೂ ಮಂಜುನಾಥನಿಗೆ ಇರಿದು ಸ್ಥಳದಿಂದ ಪರಾರಿಯಾಗಿದ್ಧಾನೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪೌರ ಕಾರ್ಮಿಕ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟರೆ, ಕಿರಣ್ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.
ಪ್ರಕರಣ ಸಂಬಂಧ ಹಳೇ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಐವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರಿದ್ದು, ಅವರನ್ನು ಬಂಧಿಸುವಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.




























