ಪಟಾಕಿ ಅವಘಡ: ೨೫೦ಕ್ಕೂ ಹೆಚ್ಚು ಮಂದಿಗೆ ಗಾಯ

ಪಟಾಕಿ ಸಿಡಿತದಿಂದ ಗಾಯಗೊಂಡಿರುವ ಮಕ್ಕಳಿಗೆ ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಅವರು ಕಣ್ಣಿನ ಪರೀಕ್ಷೆ ಮಾಡುತ್ತಿರುವುದು.

ಬೆಂಗಳೂರು, ಅ.೨೩-ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ಹಾನಿ ಮಾಡಿಕೊಂಡವರು ಸೇರಿ ೨೫೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.


ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು ಮತ್ತು ದಾರಿಯಲ್ಲಿ ಹೋಗುವವರಿಗೆ ಪಟಾಕಿ ಕಿಡಿ ತಗುಲಿ ಗಾಯಗೊಂಡಿದ್ದಾರೆ.


ನಾರಾಯಣ ನೇತ್ರಾಲಯದಲ್ಲಿ ೧೦೦ ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಅದರಲ್ಲಿ ೫೦ ಕ್ಕೂ ಮಕ್ಕಳಿದ್ದಾರೆ. ೧೦ ಮಂದಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಉಳಿದವರು ಹೊರ ರೋಗಿಗಳಾಗಿ ಮತ್ತು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ೧೦೦ ಜನರಲ್ಲಿ ೫೦ ಜನರು ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ.


ಉಳಿದವರು ಬೇರೆಯವರು ಸಿಡಿಸಿದ ಪಟಾಕಿ ಕಿಡಿ ಸಿಡಿದು ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ೯೩ ಮಂದಿ ಚಿಕಿತ್ಸೆಗೆ ನೀಡಲಾಗಿದ್ದು, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ೩೦ ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ೨೦ ಪ್ರಕರಣ ದಾಖಲಾಗಿದ್ರೆ, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ೧೦ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು. ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ೧೦ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.


ಪಟಾಕಿ ಸಿಡಿತದಿಂದ ೨೦ ವರ್ಷದ ಯುವಕ ಶಾಶ್ವತ ದೃಷ್ಟಿ ಸಮಸ್ಯೆಗೆ ತುತ್ತಾಗಿದ್ದಾನೆ. ಪಟಾಕಿ ಸಿಡಿದು ಕಣ್ಣಿನ ದೃಷ್ಟಿ ಸಂಪೂರ್ಣ ಹಾನಿ ಆಗಿದೆ. ಬಿಹಾರ ಮೂಲದ ಯುವಕ ನಗರ ಅಕ್ಕಿಪೇಟೆಯಲ್ಲಿ ವಾಸವಾಗಿದ್ದು, ಇಡೀ ಕುಟುಂಬ ಈತನ ದುಡಿಮೆ ಮೇಲೆ ಅವಲಂಬನೆ ಆಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ರಸ್ತೆಯಲ್ಲಿ ನಡೆದಕೊಂಡು ಹೋಗುತ್ತಿದ್ದ ೬೭ ವರ್ಷದ ವಿದೇಶಿ ವ್ಯಕ್ತಿಯ ಕಣ್ಣಿಗೆ ಪಟಾಕಿಯ ಕಿಡಿ ಕಣ್ಣಿಗೆ ತಾಗಿ ಗಾಯಗೊಂಡಿದ್ದಾರೆ. ಅವರ ಕಣ್ಣಿನ ರೆಟಿನಾ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹತ್ತು ವರ್ಷದ ಬಾಲಕ ಪಟಾಕಿ ಹಚ್ಚುವಾಗ ಕಿಡಿ ಸಿಡಿತದಿಂದ ಅವರ ಕಣ್ಣಿನ ರೆಪ್ಪೆ, ಕೂದಲು ಸುಟ್ಟಿದ್ದು, ಕಾರ್ನಿಯಾಗೆ ಪಟಾಕಿ ಕಣಗಳು ಸೇರಿ ಹಾನಿಯಾಗಿದೆ.


ಬಾಲಕನ ಕಣ್ಣಿಗೆ ತೀವ್ರ ಗಾಯ:


ಪಟಾಕಿ ಸಿಡಿದು ೧೩ ವರ್ಷದ ಬಾಲಕನ ಕಣ್ಣಿಗೆ ತೀವ್ರ ಗಾಯ ಆಗಿದೆ. ಬಾಲಕನಿಗೆ ಶೇಕಡಾ ೭೦ ರಷ್ಟು ವಿಷನ್ ಸಮಸ್ಯೆ ಆಗಿದ್ದು, ಬಾಲಕನ ಕಣ್ಣಿಗೆ ಸರ್ಜರಿ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ. ೬ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ, ಸದ್ಯ ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.


ಸುಟ್ಟ ಗಾಯ ಹೆಚ್ಚು:


ಪಟಾಕಿ ಸಿಡಿಸುವಾಗ ಹಾಗೂ ಬೇರೆಯವರು ಸಿಡಿಸಿದ ಪಟಾಕಿಗಳಿಂದ ನೂರಕ್ಕೂ ಮಂದಿ ಮುಖ ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಹಾಗೂ ಹೆಚ್ಚಿನ ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ,ಬಹುತೇಕ ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಇಬ್ಬರಿಗೆ ದೃಷ್ಟಿ ದೋಷ

ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿಗೆ ಹಾನಿಮಾಡಿಕೊಂಡ ೩೭ ಜನರ ಪೈಕಿ ೯ ಮಂದಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ,೧೪ ಜನರಿಗೆ ತೀವ್ರ ಗಾಯವಾಗಿದ್ದರೆ ಇಬ್ಬರಿಗೆ ದೃಷ್ಟಿ ದೋಷ ಎದುರಾಗಿದೆ ಎಂದು ಮಿಂಟೋ ಆಸ್ಪತ್ರೆಯ ಅಪರ ನಿರ್ದೇಶಕ ಡಾ. ಶಶಿಧರ್ ಹೇಳಿದ್ದಾರೆ.


ಅರಸಿಕೇರೆ ಮೂಲದ ೧೪ ವರ್ಷದ ವಿದ್ಯಾರ್ಥಿ ಕಣ್ಣುಗುಡ್ಡೆ ಒಡೆದು ದೃಷ್ಟಿ ಕಳೆದುಕೊಂಡಿದ್ದಾನೆ. ಸ್ನೇಹಿತರ ಜೊತೆ ಪಟಾಕಿ ಸಿಡಸುವ ವೇಳೆ ಬಾಂಬ್ ಪಟಾಕಿ ಸಿಡದು ಘಟನೆ ನಡೆದಿದೆ. ಪಟಾಕಿ ಸಿಡದ ತೀವ್ರತೆಗೆ ಕಾರ್ನಿಯ ಒಡೆದು ಮೂರು ಭಾಗವಾಗಿದೆ. ಮಗನ ಮುಂದಿನ ಭವಿಷ್ಯ ನೆನೆದು ತಾಯಿ ಕಣ್ಣೀರು ಹಾಕಿದ್ದಾರೆ. ಬಡತನ ಹಿನ್ನಲೆಯಲ್ಲಿ ತಾಯಿ ಜೊತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದನು.


ಮಿಂಟೋ ಆಸ್ಪತ್ರೆಯಲ್ಲಿ ಒಂದು ಗಂಭೀರ ಪ್ರಕರಣ ಕೂಡ ದಾಖಲಾಗಿದೆ. ೧೯ ವರ್ಷದ ಬಿಹಾರ್ ಮೂಲದ ಯುವಕನ ಎಡಗಣ್ಣು ಸಂಪೂರ್ಣ ದೃಷ್ಟಿ ದೋಷವಾಗಿದೆ. ಫ್ಲವರ್ ಪಾಟ್ ಸಿಡಿಸುವ ವೇಳೆ ಅನಾಹುತ ಸಂಭವಿಸಿದ್ದು, ಯುವಕನ ಕಣ್ಣಿನ ಗುಡ್ಡೆಯೇ ಸೀಳಿದೆ. ಫ್ಲವರ್ ಪಾಟ್ ಪಟಾಕಿಯನ್ನು ಕೈಯಲ್ಲಿ ಎತ್ತಿಕೊಂಡು ಯುವಕ ಶೋ ಕೊಟ್ಟಿದ್ದ. ಕೈಗೆ ಎತ್ತಿಕೊಂಡ ಕೂಡಲೇ ಫ್ಲವರ್ ಪಾಟ್ ಸಿಡಿದು ಕಣ್ಣಿಗೆ ಹಾನಿಯುಂಟಾಗಿದೆ.