ನ್ಯೂಯಾರ್ಕ್,ಅ.೨೫- ಜಮ್ಮು ಮತ್ತು ಕಾಶ್ಮೀರ, ಭಾರತದ ಅವಿಭಾಜ್ಯ ಅಂಗ, ಅದನ್ನು ಎಂದಿಗೂ ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತ- ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ -ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಸೇನೆ ಗುಂಡು ಹಾರಿಸಿದ ನಂತರ ಹಲವಾರು ನಾಗರಿಕರು ಸಾವನ್ನಪ್ಪಿದ್ದು ಮಾನವ ಹಕ್ಕುಗಳ ಉಲ್ಲಂಘನೆ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ೮೦ನೇ ದಿನದಂದು ಆಯೋಜಿಸಲಾದ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ಪಾಕ್ ಆಕ್ರಮಿತ ಕಾಶ್ಮಿರದ ಜನರ ಬೇಡಿಕೆಗಳನ್ನು ಈಡೇರಿಸಲು ಪಾಕಿಸ್ತಾನ ವಿಫಲವಾಗಿದೆ. ಹೀಗಾಗಿ ಪ್ರತಿಭಟನೆಗಳು ಭುಗಿಲೆದ್ದಿವೆ. ಇದನ್ನು ತಕ್ಷಣ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪದೇ ಪದೇ ಆಗುತ್ತಿದೆ, ಇದನ್ನು ನೋಡಿಕೊಂಡು ಕೂರಲು ಸಾಧ್ಯವಿಲ್ಲ, ಪಾಕಿಸ್ತಾನ ತಕ್ಷಣ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ನಿಲ್ಲಸಬೇಕು ಎಂದು ಒತ್ತಾಯಿಸಿದ್ದಾರೆ.
ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಕ್ರೌರ್ಯ, ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘಟನೆ ನಿಲ್ಲಿಸಬೇಕು, ಜೊತೆಗೆ ಪಾಕಿಸ್ತಾನ ಸೇನೆಯ ಆಕ್ರಮಣ, ದಮನ, ಕ್ರೌರ್ಯ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆಯ ವಿರುದ್ಧ ಜನಸಂಖ್ಯೆಯು ಬಹಿರಂಗ ದಂಗೆ ಎದ್ದಿದೆ ಅದಕ್ಕೆ ಮತ್ತಷ್ಟು ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಯಾವಾಗಲೂ “ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗ”ವಾಗಿ ಉಳಿಯುತ್ತದೆ ಮತ್ತು ಇಲ್ಲಿನ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಆನಂದಿಸುತ್ತಾರೆ. ಹೀಗಿದ್ದರೂ ಪಾಕಿಸ್ತಾನ ವಿನಾ ಕಾರಣ ಕಾಲು ಕೆರೆದುಕೊಂಡು ಬರುತ್ತಿದೆ, ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ, ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ, ಮತ್ತು ಯಾವಾಗಲೂ ಭಾರತದ ಭಾಗವೇ ಆಗಿರಲಿದೆ, ಇದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಾಗದ ಮಾತು ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಜನರು ಭಾರತದ ಕಾಲ-ಪರೀಕ್ಷಿತ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಪ್ರಕಾರ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುತ್ತಾರೆ. ಪಾಕಿಸ್ತಾನಕ್ಕೆ ಪರಕೀಯ ಪರಿಕಲ್ಪನೆಗಳು. ಹೀಗಾಗಿ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆ ಗುಂಡು ಹಾರಿಸಿದ ನಂತರ ಹಲವಾರು ನಾಗರಿಕರು ಸಾವನ್ನಪ್ಪಿದರು. ಜನರ ಬೇಡಿಕೆಗಳನ್ನು ಪರಿಹರಿಸಲು ಸರ್ಕಾರ ವಿಫಲವಾದ ನಂತರ ಅಶಾಂತಿ ಭುಗಿಲೆದ್ದಿತು. ಪ್ರತಿಭಟನೆಗಳನ್ನು ಜಂಟಿ ಅವಾಮಿ ಕ್ರಿಯಾ ಸಮಿತಿ ಮುನ್ನಡೆಸಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.



























