ಮಗನನ್ನು ಕೊಂದ ತಂದೆಗೆ ಜೀವಾವಧಿ ಶಿಕ್ಷೆ

ಕಲಬುರಗಿ,ಅ.29: ತಂದೆ ತಾಯಿಯ ಜಗಳ ಬಿಡಿಸಲು ಬಂದ ಮಗನನ್ನು ತಂದೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10,500 ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕಲಬುರಗಿ ತಾಜನಗರದ ಮಹ್ಮದ್ ಯೂಸುಫ್ ಮುಸ್ತಾನಸಾಬ್ ಮಹಾಗಾಂವ ವಾಡಿವಾಲೆ (42) ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಪರಾಧಿ ಮಹ್ಮದ್ ಯೂಸುಫ್ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ.
2024 ರ ಮೇ 31 ರಂದು ನಡೆದ ಜಗಳದ ಘಟನೆಯಲ್ಲಿ ಏಕೆ ಪದೇ ಪದೇ ತಾಯಿಯೊಂದಿಗೆ ಜಗಳ ತೆಗೆಯುತ್ತೀ ಎಂದು ಮಗ ಅಸ್ರಾರ್ ಅಹ್ಮದ್ (24) ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ತಂದೆ ಮಹ್ಮದ್ ಯೂಸುಫ್ ನಿನ್ನ ತಾಯಿಯ ಪರವಾಗಿಯೇ ನೀನು ನನಗೆ ಬುದ್ಧಿವಾದ ಹೇಳಲು ಬರುತ್ತೀಯಾ ಎಂದು ಪ್ರಶ್ನಿಸಿ ಚಾಕು ತೆಗೆದುಕೊಂಡು ಮಗನಿಗೆ ತಿವಿದು ಗಾಯಗೊಳಿಸಿದ್ದ. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಜೂನ್ 3ರಂದು ಚಿಕಿತ್ಸೆಗೆ ಸ್ಪಂದಿಸದೇ ಅಸ್ರಾರ್ ಮೃತಪಟ್ಟಿದ್ದನು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಚೌಕ ಪೆÇಲೀಸ್ ಠಾಣೆಯ ಇನ್‍ಸ್ಪೆಕ್ಟರ್ ರಾಘವೇಂದ್ರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಚನ್ನಪ್ಪಗೌಡ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ಅವರು ವಾದ ಮಂಡಿಸಿದ್ದರು.