Home ಜಿಲ್ಲೆ ಕಲ್ಲಂಗಡಿ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿ

ಕಲ್ಲಂಗಡಿ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿ

ಯಾದಗಿರಿ: ಮಾ.16:ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಲ್ಲಂಗಡಿ ಬೆಳೆದ ರೈತರು ಈ ಬಾರಿ ಬೆಲೆ ಕುಸಿತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ್ಣು ಕಟಾವು ಸಮಯದಲ್ಲಿ ಮಾರುಕಟ್ಟೆ ದರ ದಿಢೀರ್ ಇಳಿಕೆಯಾಗಿರುವುದರಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕಲ್ಲಂಗಡಿಗೆ ಪ್ರತಿ ಕೆಜಿಗೆ 22ರಿಂದ 30 ರೂಪಾಯಿ ವರೆಗೆ ಬೆಲೆ ದೊರಕುತ್ತಿದ್ದರಿಂದ ರೈತರು ಹೆಚ್ಚಿನ ನಿರೀಕ್ಷೆಯೊಂದಿಗೆ ಬೆಳೆ ಬೆಳೆದಿದ್ದರು. ಆದರೆ ಇದೀಗ ಮಾರುಕಟ್ಟೆಯಲ್ಲಿ ದರ 6ರಿಂದ 8 ರೂಪಾಯಿಗೆ ಕುಸಿದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದ ರೈತ ನಿಂಗಣ್ಣ ಕರಡಿ ಅವರು ನಾಲ್ಕು ಎಕರೆ ಜಮೀನನ್ನು ಲೀಜ್ ಪಡೆದು ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಭೂಮಿಯನ್ನು ಆಳವಾಗಿ ಉಳಿಮೆ ಮಾಡಿ, ಹನಿ ನೀರಾವರಿ ವ್ಯವಸ್ಥೆ ಅಳವಡಿಸಿ ಹಾಗೂ ಮೆಲ್ಚಿಂಗ್ ಪೇಪರ್ ಬಳಸಿಕೊಂಡು ಬೆಳೆ ಬೆಳೆದಿದ್ದಾರೆ. ಬಾಗಲಕೋಟೆ ನರ್ಸರಿಯಿಂದ ಸುಮಾರು 24 ಸಾವಿರ ಸಸಿಗಳನ್ನು ತರಿಸಿ ನಾಲ್ಕು ಎಕರೆಯಲ್ಲಿ ನಾಟಿ ಮಾಡಲಾಗಿದೆ. ಕೃಷಿ ಕಾರ್ಯಗಳು, ಕೂಲಿ ಹಾಗೂ ಇತರ ಖರ್ಚುಗಳನ್ನು ಸೇರಿಸಿ ಮೂರು ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗ ಬೆಳೆ ಉತ್ತಮವಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಕಡಿಮೆ ದರ ಕೇಳುತ್ತಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರೈತರಿಂದ ಕಡಿಮೆ ದರಕ್ಕೆ ಕಲ್ಲಂಗಡಿ ಖರೀದಿ ಮಾಡುವ ಮಧ್ಯವರ್ತಿಗಳು ಅದೇ ಹಣ್ಣನ್ನು ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ರೈತ ನಿಂಗಣ್ಣ ಕರಡಿ, ಬೆಳೆ ಬೆಳೆದ ರೈತರಿಗೆ ನ್ಯಾಯವಾದ ಬೆಲೆ ಸಿಗದಿದ್ದರೆ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ರೈತರು ಮುಂದೆ ಬರಲು ಸಾಧ್ಯವಿಲ್ಲ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.