ಜಾತ್ರೆ ಸಂಭ್ರಮ ಕಣ್ಣೀರಿನಲ್ಲಿ ಅಂತ್ಯ: ಭೀಮಾ ನದಿಯಲ್ಲಿ 7 ವರ್ಷದ ಬಾಲಕಿ ಮುಳುಗಿ ಸಾವು

ಯಾದಗಿರಿ:ಫೆ.26: ಧಾರ್ಮಿಕ ಉತ್ಸವದ ಉಲ್ಲಾಸ ಕ್ಷಣಾರ್ಧದಲ್ಲಿ ದಾರುಣ ದುರಂತಕ್ಕೆ ತಿರುಗಿದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಭೀಮಾ ನದಿಯಲ್ಲಿ ಮುಳುಗಿ ಏಳು ವರ್ಷದ ಬಾಲಕಿ ಸಾವನ್ನಪ್ಪಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಜೋಳದಡಗಿ ಗ್ರಾಮದ ಮೀನುಗಾರ ಕುಟುಂಬದ ಮರೇಮ್ಮ (7) ಪೆÇೀಷಕರೊಂದಿಗೆ ಬೆನಕನಹಳ್ಳಿ ಗ್ರಾಮದಲ್ಲಿ ನಡೆದ ಮಾರೇಮ್ಮ ದೇವಿಯ ಜಾತ್ರೆಗೆ ಆಗಮಿಸಿದ್ದಳು. ಜಾತ್ರೆಯ ಅಂಗವಾಗಿ ನದಿ ತೀರದಲ್ಲಿ ಜನಸಂದಣಿ ಹೆಚ್ಚಿದ್ದ ವೇಳೆ, ಬಾಲಕಿ ಅಜಾಗರೂಕತೆಯಿಂದ ನೀರಿನೊಳಗೆ ಜಾರಿಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ತಾಯಿ ಬಟ್ಟೆ ತೊಳೆಯುವ ಕಾರ್ಯದಲ್ಲಿ ನಿರತರಾಗಿದ್ದಾಗ ಮಗಳು ಕಣ್ಣಿಗೆ ಕಾಣದಂತೆ ನದಿ ನೀರಿನಲ್ಲಿ ಇಳಿದಿರುವುದು ದುರಂತಕ್ಕೆ ಕಾರಣವಾಯಿತು ಎನ್ನಲಾಗಿದೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೀರಿಗೆ ಧುಮುಕಿ ರಕ್ಷಣೆ ಕಾರ್ಯಾಚರಣೆ ನಡೆಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೊರತೆಗೆದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ಈ ದುರ್ಘಟನೆಯು ಜಾತ್ರಾ ಸಂದರ್ಭಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ನದಿ ತೀರದಲ್ಲಿ ಎಚ್ಚರಿಕಾ ಫಲಕಗಳ ಕೊರತೆ, ಮಕ್ಕಳ ಮೇಲಿನ ಸಮರ್ಪಕ ನಿಗಾವಹಿಸದಿರುವುದು ಹಾಗೂ ಜನಸಂದಣಿಯ ನಡುವೆ ಸುರಕ್ಷತಾ ವ್ಯವಸ್ಥೆಯ ಅಭಾವ ಈ ದುರಂತಕ್ಕೆ ಕಾರಣವಾಗಿದೆಯೇ ಎಂಬ ಚರ್ಚೆ ಗ್ರಾಮಸ್ಥರ ನಡುವೆ ಕೇಳಿಬರುತ್ತಿದೆ.

ಘಟನೆ ವಡಗೇರಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕುಟುಂಬದ ಆಕ್ರಂದನದ ನಡುವೆ ಗ್ರಾಮದಲ್ಲಿ ಮೌನ ವಾತಾವರಣ ನಿರ್ಮಾಣವಾಗಿದ್ದು, ಜಾತ್ರೆಯ ಸಂಭ್ರಮ ಶೋಕಾಚರಣೆಯಾಗಿ ಮಾರ್ಪಟ್ಟಿದೆ.