
ಅಶೋಕ್ ತರಾಟೆ
ಬೆಂಗಳೂರು, ಫೆ. ೨- ರಾಜ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಅತಿ ಹೆಚ್ಚು ಸಾಲ ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆಯಾಗಿದೆ. ಅವರಿಗೆ ಪ್ರಶಸ್ತಿ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯಪಾಲರ ವಂದನಾ ನಿರ್ಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದರೆ ಇವರಿಗೆ ಕೋಪ ಬರುತ್ತದೆ. ಇದುವರೆಗೂ ಸಿದ್ದರಾಮಯ್ಯನವರು ೭ ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಅತಿ ಹೆಚ್ಚು ಸಾಲ ಮಾಡಿರುವುದು ಸಿದ್ದರಾಮಯ್ಯ ಎಂದರು.
ಮಾಡಿರುವ ಸಾಲವನ್ನು ತೀರಿಸಲು ಆಗುತ್ತಿಲ್ಲ. ಹೀಗಿರುವಾಗ ಆರ್ಥಿಕ ಶಿಸ್ತು ಎಲ್ಲಿಂದ ಬರುತ್ತದೆ, ಬದನೆಕಾಯಿ ಎಂದರು.
ಕರ್ನಾಟಕದಲ್ಲೇ ಅತಿ ಹೆಚ್ಚು ಸಾಲ ಮಾಡಿರುವ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಗೆ ಪ್ರಶಸ್ತಿ ನೀಡಬೇಕು ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಾಗಿದ್ದರೆ ಗೃಹಲಕ್ಷ್ಮೀ ಯೋಜನೆಯ ೨೦೨೫ರ ಫೆಬ್ರವರಿ ಕಂತಿನ ೫ ಸಾವಿರ ಕೋಟಿ ಹಣ ಎಲ್ಲಿ ಹೋಯಿತು. ಅನ್ನಭಾಗ್ಯಕ್ಕೂ ಕನ್ನ ಹಾಕಿದ್ದಾರೆ. ಕಳೆದ ವರ್ಷದ ಜನವರಿಯ ಅನ್ನಭಾಗ್ಯದ ೬೫೭ ಕೋಟಿ ರೂ. ಹಣ ಬಿಡುಗಡೆಯಾಗಿಲ್ಲ ಎಂದರು.
ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಉಪಮುಖ್ಯಮಂತ್ರಿಗಳು ಹಣ ಬಿಡುಗಡೆಯಾಗಿಲ್ಲ. ಆ ಹೆಣ್ಣು ಮಗಳು ಏನು ಮಾಡುತ್ತಾರೆ ಎಂದು ಸಚಿವರ ಪರ ವಹಿಸುತ್ತಾರೆ. ಯಾರ ಮಾತನ್ನು ನಂಬುವುದು ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೋಡೆತ್ತುಗಳು ಎಂದೆಲ್ಲಾ ಹೇಳುತ್ತಿದ್ದರು. ಈಗ ಕುಂಟೆತ್ತುಗಳಾಗಿದ್ದಾರೆ. ಇವರಿಬ್ಬರು ಒಂದೊಂದು ದಾರಿಯಲ್ಲಿ ಓಡಿ ಹೋಗಿದ್ದಾರೆ ಎಂದು ಟೀಕಿಸಿದರು.
ಇದೊಂದು ಇಲ್ಲಗಳ ಸರ್ಕಾರ. ಆಡು ಮುಟ್ಟಿದ ಸೊಪ್ಪಿಲ್ಲ ಎಂಬಂತೆ ಈ ಸರ್ಕಾರ ಲೂಟಿ ಮಾಡದ ಇಲಾಖೆ ಇಲ್ಲ. ಜನ ಕೆಲಸ ಆಗಿಲ್ಲವೆಂದು, ಗುತ್ತಿಗೆದಾರರು ಹಣ ಬಿಡುಗಡೆಯಾಗಿಲ್ಲವೆಂದು, ಅಂಗನವಾಡಿ ಕಾರ್ಯಕರ್ತೆಯರು ವೇತನ ಬಿಡುಗಡೆಯಾಗಿಲ್ಲವೆಂದು ಪರದಾಡುತ್ತಿದ್ದರೆ, ಮಂತ್ರಿಗಳು ಹಣ ಮಾಡುವುದರಲ್ಲಿ ಮುಳುಗಿದ್ದಾರೆ. ಈ ಸರ್ಕಾರ ದಿವಾಳಿಯಾಗಿದೆ. ಖಜಾನೆ ಖಾಲಿ.. ಖಾಲಿ.. ಎಂದು ಅಶೋಕ್ ಹೇಳಿದರು.
ಖಜಾನೆಯಲ್ಲಿ ಹೆಗ್ಗಣಗಳ ಕಾಟ ಇದೆ. ಸರ್ಕಾರ ದಿವಾಳಿಯಾಗಿದೆ ಎಂದು ಅವರು ಹೇಳಿದರು.
ರಾಮನನ್ನು ಕಂಡರೆ ಅಲರ್ಜಿ
ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಆಕ್ಷೇಪದ ಮಾತುಗಳನ್ನು ಹೇಳಿದೆ. ಇವರಿಗೆ ರಾಮನನ್ನು ಕಂಡರೆ ಅಲರ್ಜಿ. ರಾಮನನ್ನು ಕಂಡರೆ ಏಕೆ ನಿಮಗೆ ವಿರೋಧ ಎಂದು ಪ್ರಶ್ನಿಸಿದರು.
ರಾಮನಗರ ಜಿಲ್ಲೆಯನ್ನು ತೆಗೆದು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಿದ್ದೀರಿ, ರಾಮ ಈ ದೇಶದ ಆದರ್ಶ ಪುರುಷ. ನುಡಿದಂತೆ ನಡೆದವನು. ರಾಮನನ್ನು ಕಂಡರೆ ಏಕೆ ನಿಮಗೆ ಅಲರ್ಜಿ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಎಲ್ಲದರಲ್ಲೂ ದೇವರನ್ನು ಏಕೆ ಎಳೆದು ತರುತ್ತೀರಿ, ಸುಮ್ಮನೆ ರಾಮ, ಶ್ರೀರಾಮ ಎಂದೆಲ್ಲಾ ಮಾತನಾಡುತ್ತೀರಿ. ವಿಬಿ ಜಿ ರಾಮ್ ಜಿ ಕಾಯ್ದೆ ಅದು ಎಂದಾಗ, ಮಾತು ಮುಂದುವರೆಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನಿಮ್ಮ ಕಾಂಗ್ರೆಸ್ ನಾಯಕರಿಗೆ ಗಾಂಧೀಜಿ ಹೆಸರು ತೆಗೆದು ರಾಮನ ಹೆಸರು ಇಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮಗೆ ಮಾಹಿತಿ ಇಲ್ಲ ಅನಿಸುತ್ತದೆ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದ ಜತೆ ಪದೇ ಪದೇ ಕಾಲು ಕೆರೆದು ಜಗಳಕ್ಕೆ ಹೋಗುತ್ತಿದ್ದೀರಿ. ಇದು ಸರಿಯಲ್ಲ. ಈ ಹಿಂದೆ ಎಸ್.ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಅದನ್ನು ರಾಜ್ಯದ ಲಾಭಕ್ಕೆ ಬಳಸಿಕೊಂಡಿದ್ದರು. ಕೇಂದ್ರದ ಜತೆ ಸೌಹಾರ್ದತೆ ಇರಬೇಕು. ಕಾಲು ಕೆರೆದು ಜಗಳವಾಡುವುದು ಸರಿಯಲ್ಲ. ಕೇಂದ್ರದ ವಿರುದ್ಧ ವಿಧಾನಸಭೆಯಲ್ಲಿ ಇದುವರೆಗೂ ೧೭ ನಿರ್ಣಯ ಮಂಡಿಸಿದ್ದೀರಿ, ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆಯೇ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದೆಲ್ಲಾ ಹೇಳುತ್ತಿದ್ದೀರಿ, ಈ ದೇಶದಲ್ಲಿ ಸಂವಿಧಾನವನ್ನು ೭೨ ಬಾರಿ ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಆಡಳಿತದಲ್ಲಿ. ವಾಜಪೇಯಿ ಅವರು ೧೩ ಬಾರಿ ಸಂವಿಧಾನ ತಿದ್ದುಪಡಿ ಮಾಡಿದರು. ಮೋದಿಯವರು ೯ ಬಾರಿ ತಿದ್ದುಪಡಿ ಮಾಡಿದ್ದಾರೆ ಅಷ್ಟೇ. ಅತಿ ಹೆಚ್ಚು ಸಂವಿಧಾನ ತಿದ್ದುಪಡಿಯಾಗಿರುವುದು ಕಾಂಗ್ರೆಸ್ ಆಡಳಿತದಲ್ಲೇ. ಕಾಂಗ್ರೆಸ್‌ನವರ ಸಂವಿಧಾನ ತಿದ್ದುಪಡಿಯಿಂದ ಬೇಸತ್ತು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನವನ್ನು ಸುಟ್ಟು ಹಾಕುತ್ತೀನಿ ಎಂದು ಗುಡುಗಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ದೇವಸ್ಥಾನ ಕಟ್ಟುವುದು ದೇವರು ಬಂದು ನೆಲೆಸಲಿ ಎಂದು.
ಆದರೆ ದೇವರ ಪ್ರತಿಷ್ಠಾಪನೆ ಆಗುವ ಮೊದಲೇ ಪಿಶಾಚಿಗಳು ವಕ್ಕರಿಸಿವೆ. ದೇವರು ನೆಲೆಸಲಿ ಎಂಬುದು ನನ್ನ ಇಚ್ಛೆಯಾಗಿತ್ತು. ಅದೇ ಕಾರಣಕ್ಕೆ ನಾನು ಸಂವಿಧಾನ ಸುಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು. ಮಹಾತ್ಮಗಾಂಧೀಜಿಯವರ ಪೂರ್ಣ ಹೆಸರು ಮೋಹನ್‌ದಾಸ್ ಕರಮಚಂದ್ರ ಗಾಂಧಿ. ನೀವು ನಕಲಿ ಗಾಂಧಿಗಳನ್ನು ಉತ್ಪತ್ತಿ ಮಾಡಿದ್ದೀರಿ. ದೇಶದ ಎಷ್ಟು ಯೋಜನೆಗಳಿಗೆ ಗಾಂಧೀಜಿ ಹೆಸರು ಇಟ್ಟಿದ್ದೀರಿ ಹೇಳಿ ನೋಡೋಣ ಎಂದು ಸವಾಲು ಹಾಕಿದ ಅಶೋಕ್, ಗಾಂಧೀಜಿ ಹೆಸರಿಗಿಂತ ಇಂದಿರಾಗಾಂಧಿ ಮತ್ತು ಕುಟುಂಬದವರ ಹೆಸರೇ ದೊಡ್ಡದಿದೆ. ವಿವಿಧ ಸಂಸ್ಥೆಗಳಿಗೆ ಇಂದಿರಾಗಾಂಧಿ ಕುಟುಂಬದ ಹೆಸರಿಟ್ಟಿರುವ ದೊಡ್ಡ ಪಟ್ಟಿಯನ್ನೇ ಅಶೋಕ್ ಸದನದಲ್ಲಿ ಪ್ರದರ್ಶಿಸಿದರು.
ನಾಗರಹೊಳೆ ಅಭಯಾರಣ್ಯಕ್ಕೂ ರಾಜೀವ್‌ಗಾಂಧಿ ಹೆಸರಿಟ್ಟಿದ್ದೀರಿ. ರಾಜೀವ್ ಗಾಂಧಿ ಅಭಯಾರಣ್ಯದಲ್ಲಿ ಏನು ಮಾಡಿದ್ದಾರೆ, ಇಡೀ ದೇಶದಲ್ಲಿ ೪೪೫ ಇಂದಿರಾಗಾಂಧಿ ಕುಟುಂಬದ ಹೆಸರಿರುವ ಯೋಜನೆಗಳು ಇವೆ. ಇದೆಲ್ಲಾ ಜನರಿಗೆ ಗೊತ್ತಿದೆ. ಈ ವಂಶದ ಹೆಸರು ಇಟ್ಟಿರುವುದು ಜನರಿಗೆ ಗೊತ್ತಿದೆ. ಜನರೇ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದರು.
ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ನಮ್ಮ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಮೂಲಕ ಶೇ. ೪೦ ರಷ್ಟು ಕಮೀಷನ್ ಆರೋಪ ಮಾಡಿದ್ದೀರಿ. ಈಗ ಇದೇ ಗುತ್ತಿಗೆದಾರರ ಸಂಘ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೂರು ಬಾರಿ ಪತ್ರಿಕಾಗೋಷ್ಠಿ ಮಾಡಿ ಕಮೀಷನ್ ದುಪ್ಪಟ್ಟಾಗಿದೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಹೈಕಮಾಂಡ್ ರಾಹುಲ್‌ಗಾಂಧಿಯವರಿಗೂ ದೂರು ಕೊಟ್ಟಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರ ಬಗ್ಗೆಯೂ ಗುತ್ತಿಗೆದಾರರು ಮಾತನಾಡಿದ್ದು, ಖಾಸಗಿ ಕಚೇರಿಯಲ್ಲಿ ಟೆಂಡರ್‌ಗಳು ಅಂತಿಮವಾಗುತ್ತಿವೆ ಎಂದೆಲ್ಲಾ ತಿಳಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಕಮೀಷನ್ ದಂಧೆ ಎಂದೆಲ್ಲಾ ಬೊಬ್ಬೆ ಹೊಡೆದ ನೀವು ಈಗ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ ಅವರು, ಆಂಧ್ರ ಗುತ್ತಿಗೆದಾರರ ಅನುಕೂಲಕ್ಕಾಗಿ ದೊಡ್ಡದೊಡ್ಡ ಪ್ಯಾಕೇಜ್‌ಗಳನ್ನು ಮಾಡಿ ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಈ ಗುತ್ತಿಗೆದಾರರು ಹೇಳಿರುವುದು ಸುಳ್ಳು ಎಂದಾದ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೆವು. ನೀವು ತಪ್ಪು ಮಾಡಿರುವುದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ನೀವು ಅಪರಾಧಿಗಳು ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಕೆಕೆಆರ್‌ಡಿಬಿ ಯಲ್ಲೂ ರಾಜ್ಯದ ಗುತ್ತಿಗೆದಾರರಿಗೆ ಒಂದು ಸಣ್ಣ ಗುತ್ತಿಗೆಯೂ ಕೊಟ್ಟಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಅವರು ಹೇಳಿರುವುದು ಸುಳ್ಳು ಎಂದಾದರ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿ. ಏಕೆ ಪ್ರಕರಣ ದಾಖಲಿಸಿಲ್ಲ, ನೀವು ತಪ್ಪಿತಸ್ಥರಿದ್ದೀರಿ ಎಂದು ಆರ್. ಅಶೋಕ್ ಹೇಳಿದರು.
ಗುತ್ತಿಗೆದಾರರ ಬಾಕಿ ಬಿಲ್ ಹಿಂದಿನ ಸರ್ಕಾರದ್ದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ೨೦೧೩ ರಲ್ಲಿ ನೀವು ಸರ್ಕಾರ ಬಿಟ್ಟು ಕೊಟ್ಟಾಗ ೧೪ ಸಾವಿರ ಕೋಟಿ ರೂಪಾಯಿ ಬಿಲ್ ಬಾಕಿ ಇತ್ತು. ಅದನ್ನು ಬಿಜೆಪಿ ಸರ್ಕಾರ ತೀರಿಸಿತು. ಇದೆಲ್ಲಾ ನಿರಂತರ ಪ್ರಕ್ರಿಯೆ ಎಂದು ಅವರು ಹೇಳಿದರು.
ಬಿಜೆಪಿ ಅಧಿಕಾರದಿಂದ ನಿರ್ಗಮಿಸುವಾಗ ಖಜಾನೆ ಖಾಲಿ.. ಖಾಲಿ.. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ನಾನು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಜತೆ ಮಾತನಾಡಿದ್ದೇನೆ. ಅವರು ಅಧಿಕಾರದಿಂದ ನಿರ್ಗಮಿಸುವಾಗ ೨೪ ಸಾವಿರ ಕೋಟಿ ಖಜಾನೆಯಲ್ಲಿ ಬಿಟ್ಟು ಹೋಗಿದ್ದರು ಎಂದು ಅವರು ತಿಳಿಸಿದರು.
ಈ ಸರ್ಕಾರದಲ್ಲಿ ಭ್ರಷ್ಟಾಚಾರ ಸೀರಿಯಲ್ ನಂತೆ ನಡೆದಿದೆ. ವಾಲ್ಮೀಕಿ ನಿಗಮದ ಹಗರಣ, ಅಬಕಾರಿ ಲೈಸೆನ್ಸ್‌ನಲ್ಲಿ ೬ ಸಾವಿರ ಕೋಟಿ ಲೂಟಿ, ದಲಿತರ ೬೩ ಸಾವಿರ ಕೋಟಿ ಹಣ ಅಕ್ರಮ ಬಳಕೆ, ಮುಡಾದಲ್ಲಿ ೩ ಸಾವಿರ ಕೋಟಿ ರೂ. ಲೂಟಿಯಾಗಿದೆ. ಈ ಲೂಟಿ ಬಗ್ಗೆ ಜಾಹೀರಾತು ಕೊಡಿ ಎಂದು ಒತ್ತಾಯಿಸಿದರು.































