ಬೀದರ:ಮೇ.24: ಪ್ರತಿಯೊಬ್ಬ ಮಾದಿಗ ಸಮಾಜದ ಜನರು ನಿಮ್ಮ ಮನೆಗೆ ಜಾತಿ ಜನಗಣತಿಗಾಗಿ ಅಧಿಕಾರಿಗಳು ಬಂದಾಗ ತಪ್ಪದೇ ಮಾದಿಗ ಎಂದು ಬರೆಸಬೇಕು. 35 ವರ್ಷಗಳ ಹೋರಾಟಕ್ಕಿಂತ ಈ ಮೇ ತಿಂಗಳ ಸಮೀಕ್ಷೆ ನಮ್ಮ ಭವಿಷ್ಯ ಬರೆಯುವ ತಿಂಗಳಾಗಿದೆ. ನಮ್ಮ ಬದುಕನ್ನು ಕಟ್ಟಿಕೊಳ್ಳುವ ತಿಂಗಳಾಗಿದೆ. ಆದ್ದರಿಂದ ತಪ್ಪದೇ ಪ್ರತಿಯೊಬ್ಬರೂ ಜಾತಿ ಜನಗಣತಿಯಲ್ಲಿ ಪಾಲ್ಗೊಂಡು, ಮನೆಮನೆಗೆ ತೆರಳಿ ನಮ್ಮ ಸಮಾಜದವರಿಗೆ ಜಾಗೃತಿ ಮೂಡಿಸಿ ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯ ಪಡೆಯಿರಿ ಎಂದು ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರಿಗೆ ಸರ್ಕಾರದಿಂದ ಆರ್ಥಿಕ ಸಹಾಯ, ನಿಗಮ ಮಂಡಳಿಯಿಂದ ಧನಸಹಾಯ, ಶೈಕ್ಷಣಿಕ ಸಹಾಯಕ್ಕಾಗಿ ನಿಮ್ಮ ನಿಮ್ಮ ಜಾತಿಯನ್ನು ತಪ್ಪದೇ ನಮೂದಿಸಿ. ಈ ಸಮೀಕ್ಷೆ ಮುಖಾಂತರ ನ್ಯಾ. ನಾಗಮೋಹನದಾಸ ಅವರು ನಮಗೆ ನ್ಯಾಯ ಒದಿಗಿಸಿಕೊಡುತ್ತಾರೆ ಎನ್ನುವ ಭರವಸೆ ನಮಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಾಮಾಜಿಕ ನ್ಯಾಯದ ಹರಿಕಾರರಾದ ಕಾರಣ ನಮಗೆ ಅವರೇ ಅಂಬೇಡ್ಕರ್ ಇದ್ದಂತೆ ಎಂದು ಪ್ರತಿಪಾದಿಸಿದರು.
ಮುಂದುವರೆದು ಮಾತನಾಡಿದ ಹೆಚ್ ಆಂಜನೇಯ ಅವರು ಇಂದಿನ ಜಾತಿ ಜನಗಣತಿಯಲ್ಲಿ ಕೆಲವು ನಕಲಿ ಜಾತಿಗಳು ಸೇರಿಕೊಳ್ಳುತ್ತಿವೆ. ಬೇಡಜಂಗಮ ಎಂಬುದು ವೀರಶೈವ ಲಿಂಗಾಯತದಲ್ಲಿ ಬರುತ್ತದೆ. ಹೀಗಾಗಿ ಬೇಡಜಂಗಮ ಬರೆಸಿದವರ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಎಂ ಅವರಿಗೆ ತಿಳಿಸಿದ್ದೇನೆ. ಈ ಹಿಂದೆಯೂ ಬೇಡಜಂಗಮ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳಿಗೆ ನೇರವಾಗಿ ಜೈಲಿಗೆ ಕಳುಹಿಸುವಂತೆ ಸಿಎಂ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು. ಔರಾದ ಬಿ. ಮೀಸಲು ಕ್ಷೇತ್ರದ ಶಾಸಕರಾದ ಪ್ರಭು ಚವ್ಹಾಣ ಅವರು ನಾಲ್ಕು ಬಾರಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ರಾಜಕೀಯ ಲಾಭ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಹೋರಾಟ ಮಾಡಿ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದರು.
ಇದೇ ವೇಳೆ ಪ್ರಮುಖರಾದ ವಿಜಯಕುಮಾರ ಜಿ. ರಾಮಕೃಷ್ಣ, ಚಂದ್ರಕಾಂತ ಹಿಪ್ಪಳಗಾಂವ, ರಾಜು ಕಡ್ಯಾಳ, ವಿಜಯಕುಮಾರ ಕೌಡ್ಯಾಳ, ದೇವದಾಸ ಚಿಂತಲಗೇರಾ, ಕಲಪ್ಪ ವೈದ್ಯ, ಶಾಮಣ್ಣ ಬಂಬುಳಗಿ, ದೇವದಾಸ ತುಮಕುಂಟೆ, ರಮೇಶ ಕಟ್ಟಿತುಗಾಂವ, ಕಮಲಾಕರ ಹೆಗಡೆ, ಸುಧಾಕರ ಕೊಳ್ಳುರ, ಪಿಟೀರ ಶ್ರೀಮಂಡಲ್, ಜೀವನ ರಿಕ್ಕೆ, ಶಿವಣ್ಣ ಹಿಪ್ಪಳಗಾಂವ, ಹರೀಶ ಗಾಯಕವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.