ಪ್ರತಿಯೊಬ್ಬರಿಗೆ ಕಾನೂನಿನ ಅರಿವು ಅಗತ್ಯ

ಕಲಬುರಗಿ,ಸೆ.22-ದಿನ ನಿತ್ಯ ಮನುಷ್ಯನ ಸುರಕ್ಷತೆ ಬಾಳಿನ ಬದುಕಿಗಾಗಿ, ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಲು ಕಾನೂನುಗಳು ಅರಿತುಕೊಳ್ಳುವುದು ಮುಖ್ಯ ಎಂದು ಎನ್‍ಎಸ್‍ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಕರ್ ದೊಡ್ಡಮನಿ ಹೇಳಿದರು.
ನಗರದ ಸ್ಟೇಷನ್ ಬಜಾರ್ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ 2025-26 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ 5ನೇ ದಿನದ ಉಪನ್ಯಾಸ ಮಾಲಿಕೆ “ಜನಸಾಮಾನ್ಯರಿಗೆ ಕಾನೂನಿನ ಅರಿವು” ವಿಷಯದ ಉಪನ್ಯಾಸ ನೀಡಿದ ಅವರು, ಸಾರ್ವಜನಿಕ ಜೀವನದಲ್ಲಿ ದಿನನಿತ್ಯ ಕಾನೂನುಗಳು ನಮಗೆ ಅನ್ವಯ ಆಗುತ್ತದೆ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾನೂನುಗಳನ್ನ ಓದಿ ಅದರ ಸದುದ್ದೇಶಗಳನ್ನ ಸಕಾರ ಗೊಳಿಸಬೇಕು. ಆ ಮೂಲಕ ಸದೃಢ ಭಾರತ ನಿರ್ಮಾಣ ಮಾಡಬೇಕು. ಜೊತೆಗೆ ಕಾನೂನುಗಳಿಗೆ ಗೌರವ ನೀಡಬೇಕೆಂದು ಹೇಳಿದ್ದರು.
ರಾಜ್ಯಶಾಸ್ತ್ರ ಉಪನ್ಯಾಸಕರಾದ ಸಿದ್ದಲಿಂಗಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡವರಿಗಾಗಿ ಸರಕಾರ ಕಾನೂನು ಸೇವಾ ಪ್ರಾಧಿಕಾರ ರಚನೆ ಮಾಡುವುದರ ಮೂಲಕ ಉಚಿತ ಕಾನೂನಿನ ನೆರವು ನೀಡುತ್ತದೆ. ಇದರ ಲಾಭವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕು ಎಂದರು.
ಉಪನ್ಯಾಸಕರಾದ ಶ್ರೀಶೈಲ್ ಕೂರ್ದ ಮುಖ್ಯ ಅತಿಥಿಗಳಾಗಿ ಮಾತನಾಡಿ ವಿದ್ಯಾರ್ಥಿಗಳು ಕಾನೂನುಗಳನ್ನು ಮುರಿಯುವ ಪ್ರವೃತ್ತಿ ಹೆಚ್ಚಾಗಿದ್ದು ಜೀವನದ ಸುರಕ್ಷತೆ ದೃಷ್ಟಿಯಿಂದ ಸಂಚಾರಿ ನಿಯಮಗಳನ್ನ ಪಾಲನೆ ಮಾಡಬೇಕು ಯಾವುದೇ ಕಾರಣಕ್ಕೂ 18 ವರ್ಷದೊಳಗಿನ ಮಕ್ಕಳು ವಾಹನಗಳನ್ನು ಚಲಾವಣೆ ಮಾಡಬಾರದು ಎಂದು ಹೇಳಿದರು.ಶಿಬಿರ ಅಧಿಕಾರಿ ಹಾಗೂ ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಪಾಂಡು ಎಲ್ ರಾಠೋಡ್, ನೇಸರ್ ಬಿಳಿಗಿಮಠ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಪ್ರಶಾಂತ್ ಸ್ವಾಗತ ಪ್ರಜ್ವಲ್ ನಿರೂಪಣೆ, ಮೋಹನ ವಂದನಾರ್ಪಣೆ ಮಾಡಿದರು.