
ಬೆಂಗಳೂರು, ಮಾ. ೧೩- ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯ ೨೦ ಎಕರೆಯಲ್ಲಿ ಆಧುನಿಕ, ಸುಸಜ್ಜಿತ ಹೂವಿನ ಮಾರುಕಟ್ಟೆಯನ್ನು ಸ್ಥಾಪಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿಂದು ತಿಳಿಸಿದರು.
ಈ ಸಾಲಿನ ಬಜೆಟ್ ಭಾಷಣದಲ್ಲಿ ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆ ಪ್ರಸ್ತಾವನೆ ಮಾಡಲಾಗಿದ್ದು, ಸುಮಾರು ೨೦ ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎಂಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಜಮೀನಿನಲ್ಲಿ ಹೂವಿನ ಮಾರುಕಟ್ಟೆ ಅಭಿವೃದ್ಧಿಪಡಿಸುವ ಯೋಜನಾ ವರದಿಯನ್ನು ತಯಾರಿಸಲಾಗಿದ್ದು, ಸದ್ಯದಲ್ಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ರವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾವನೆಯನ್ನು ಮಾಡಲಾಗಿದೆ. ಇದಾದ ಬಳಿಕ ಹೊಸಕೋಟೆಯಲ್ಲಿ ಹೂವಿನ ಮಾರುಕಟ್ಟೆ, ಶೈತ್ಯಾಗಾರ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಒಂದು ಕಾಲದಲ್ಲಿ ನಾವು ಹೊರ ದೇಶಗಳಿಂದ ಪುಷ್ಪಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ಪುಷ್ಪೋದ್ಯಮ ರಾಜ್ಯದಲ್ಲಿ ದೊಡ್ಡದಾಗಿ ಬೆಳೆದಿದ್ದು, ಪುಷ್ಪಗಳನ್ನು ರಫ್ತು ಮಾಡುವಷ್ಟು ಶಕ್ತಿ ಬಂದಿದೆ. ಸುಮಾರು ೩೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪೋದ್ಯಮ ನಡೆದಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಹೂವಿಗಾಗಿ ಸ್ವತಂತ್ರ ಮಾರುಕಟ್ಟೆ ಇಲ್ಲ. ಹಾಲಿ ಇರುವ ೧೭೦ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲೂ, ಇತರೆ ಅಧಿಸೂಚಿತ ಉತ್ಪನ್ನಗಳ ಜತೆಗೆ ಹೂವು ಉತ್ಪನ್ನದ ವಹಿವಾಟು ನಿಯಂತ್ರಣವಾಗುತ್ತಿದೆ ಎಂದರು.
ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬೆಳಗಾವಿ, ಉಡುಪಿ, ದಾವಣಗೆರೆ ಮತ್ತು ತುಮಕೂರಿನ ಚಿಕ್ಕನಹಳ್ಳಿಯಲ್ಲಿ ೪ ಪುಷ್ಪ ಹರಾಜು ಕೇಂದ್ರಗಳು ಇರುತ್ತವೆ. ಅಲ್ಲದೆ ಬೆಂಗಳೂರಿನ ಹೆಬ್ಬಾಳದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.






























