ಅಧಿಕಾರ ಹಂಚಿಕೆ ಗೊಂದಲ ನಿವಾರಿಸಿ

ಬೆಂಗಳೂರು, ಅ. ೭- ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಅಧಿಕಾರ ಹಂಚಿಕೆ, ಅದಕ್ಕೆ ಸಂಬಂಧಿಸಿದ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆಗ್ರಹಿಸಿದ್ದಾರೆ.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯ ಗೊಂದಲವನ್ನು ಹೈಕಮಾಂಡ್ ಪರಿಹರಿಸಬೇಕು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಸರಿಯಿದೆ. ಈ ಗೊಂದಲವನ್ನು ಬಗೆಹರಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.


ಪ್ರತಿನಿತ್ಯ ಮಾಧ್ಯಮದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಇದನ್ನು ಹೈಕಮಾಂಡ್ ಗಮನಿಸುತ್ತಿದೆ. ಹಾಗಾಗಿ ಅದನ್ನು ಬಗೆಹರಿಸುವುದು ಸೂಕ್ತ ಎಂದರು.


ಯಾವಾಗ ಯಾವ ಔಷಧಿ ಕೊಡಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ. ಅದನ್ನು ಅವರು ಮಾಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.


ಬಿಹಾರ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಬದಲಾವಣೆಗಳಾಗುತ್ತವೆ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬದಲಾವಣೆ ಅಂಥ ಏನೂ ಇಲ್ಲ.

ಹೈಕಮಾಂಡ್ ಬದಲಾವಣೆ ಮಾಡಬೇಕು ಎಂದರೆ ಮಾಡುತ್ತಾರೆ. ಅದು ಯಾವತ್ತೂ ಬೇಕಾದರೂ ಆಗಬಹುದು. ಬದಲಾವಣೆ ಚುನಾವಣೆ ನೋಡಿ ಮಾಡುವುದಿಲ್ಲ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರಾದ ನಮ್ಮೆಲ್ಲರಿಗೂ ಜವಾಬ್ದಾರಿ ಇದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹವಾಗುತ್ತಿದೆ. ಆ ಕಡೆ ನಾವು ಗಮನ ಹರಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಆದ್ಯತೆ. ಬದಲಾವಣೆ, ಅದು-ಇದು ಎಂಬ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದರು.


ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರನ್ನು ಅವಮಾನಿಸಿರುವುದು ಖಂಡನೀಯ. ಇಲ್ಲಿ ಭದ್ರತೆ ವೈಫಲ್ಯವಾಗಿದೆ. ವಕೀಲನನ್ನು ಮೊದಲು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿತ್ತು. ಆತನನ್ನು ಏಕೆ ಬಿಟ್ಟು ಕಳುಹಿಸಿದರೋ ಗೊತ್ತಿಲ್ಲ ಎಂದು ಅವರು ಹೇಳಿದರು.


ಈ ಘಟನೆಯನ್ನು ಇಡೀ ದೇಶ ಖಂಡಿಸಬೇಕು. ಜತೆಗೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮುಂದೆ ಈ ರೀತಿಯಾಗದಂತೆ ಕ್ರಮ ತೆಗೆದುಕೊಳ್ಳಬೇಕಿದೆ. ಈ ಬಗ್ಗೆ ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೂ ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.