
ಬೆಂಗಳೂರು, ಜ. ೬- ರಾಜ್ಯದಲ್ಲಿ ಮೆಟ್ರೋ ಪ್ರಯಾಣ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸುತ್ತಿರುವಾಗಲೇ ವಿದ್ಯುತ್ ದರ ಏರಿಕೆಯ ಬರೆಯೂ ಆಗಲಿದ್ದು, ಏಪ್ರಿಲ್‌ನಲ್ಲಿ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ವಿದ್ಯುತ್ ದರ ಏರಿಕೆ ಮಾಡುವಂತೆ ಕೋರಿ ಎಲ್ಲಾ ಎಸ್ಕಾಂಗಳು ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಪ್ರತಿ ಯೂನಿಟ್‌ಗೆ ೧ ರೂ. ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಎಸ್ಕಾಂಗಳು ಮನವಿ ಮಾಡಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಎಸ್ಕಾಂಗಳ ಪ್ರಸ್ತಾವನೆ ಬಗ್ಗೆ ಸಾರ್ವಜನಿಕ ಅಹವಾಲುಗಳನ್ನು ಆಲಿಸಿ ನಂತರ ದರ ಏರಿಕೆ ಬಗ್ಗೆ ತೀರ್ಮಾನ ಪ್ರಕಟಿಸಲಿದೆ.
ಎಸ್ಕಾಂಗಳು ಮಾಡಿರುವ ಮನವಿಯಂತೆ ಪ್ರತಿ ಯೂನಿಟ್‌ಗೆ ೧ ರೂಪಾಯಿ ದರ ಏರಿಕೆಗೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪುವ ಸಾಧ್ಯತೆ ಕಡಿಮೆಯಿದ್ದು, ಪ್ರತಿ ಯೂನಿಟ್‌ಗೆ ೮ ರಿಂದ ೧೦ ಪೈಸೆ ಹೆಚ್ಚಳಕ್ಕೆ ಒಪ್ಪಬಹುದು ಎಂದು ಮೂಲಗಳು ಹೇಳಿವೆ.
ರಾಜ್ಯದ ಎಸ್ಕಾಂಗಳು ನಷ್ಟದಲ್ಲಿದ್ದು, ಆದಾಯ ಕೊರತೆಯನ್ನು ಎದುರಿಸುತ್ತಿವೆ. ಈ ಆದಾಯ ಕೊರತೆಯನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆಯ ಪ್ರಸ್ತಾವವನ್ನು ಮಾಡಲಾಗಿದೆ.
ಕಳೆದ ವರ್ಷದ ಮಾರ್ಚ್‌ನಲ್ಲೂ ವಿದ್ಯುತ್ ದರ ಪರಿಷ್ಕರಣೆಯಾಗಿದ್ದು, ಪ್ರತಿ ಯೂನಿಟ್ ವಿದ್ಯುತ್‌ಗೆ ೩೬ ಪೈಸೆಯಷ್ಟು ದರ ಹೆಚ್ಚಳವಾಗಿತ್ತು. ಬರುವ ಏಪ್ರಿಲ್‌ನಿಂದಲೂ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.


























