
ಕಲಬುರಗಿ, ಏ.10 ಈದ್ ಹಬ್ಬವು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲದೆ, ಮಾನವೀಯತೆ, ಸಹಾನುಭೂತಿ, ಕ್ಷಮೆ ಮತ್ತು ಸಹಬಾಳ್ವೆ ಎಂಬ ಸಾರ್ವತ್ರಿಕ ಮೌಲ್ಯಗಳನ್ನು ಸಾರುತ್ತದೆ ಎಂದು ಮಂಗಳೂರಿನ ಚಾರ್ಟರ್ಡ ಅಕೌಂಟೆಂಟ್ ಆದ ಇಶಾಕ್ ಪುತ್ತೂರು ಹೇಳಿದರು.
ಕೆ.ಪಿ.ಟಿ.ಸಿ.ಎಲ್ ಮುಸ್ಲಿಂ ಉದ್ಯೋಗಿಗಳ ಕಲ್ಯಾಣ ಸಂಘದ ವತಿಯಿಂದ ಈದ್ ಮಿಲಾದ್ ಕಾರ್ಯಕ್ರಮವನ್ನು ಕೆಇಬಿ ಎಂಜಿನಿಯರ್ ಅಸೋಸಿಯೇಷನ್ ಹಾಲ್, ಜೆಸ್ಕಾಂ ನಿಗಮ ಕಚೇರಿ ಆವರಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಂಚಿಕೊಳ್ಳುವ ಸಂತೋಷವೇ ನಿಜವಾದ ಸಂತೋಷ” ಎಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ. ಧರ್ಮವನ್ನು ಪ್ರೀತಿಸುವವರು ಮನುಷ್ಯರನ್ನು ಪ್ರೀತಿಸುತ್ತಾರೆ ಎಂದು ಖುರಾನ್ ಹಾಗೂ ಈದ್ ಹಬ್ಬದ ಮಹತ್ವವನ್ನು ವಿವರಿಸಿದರು.
ಇದೇ ವೇಳೆ ಮಾತನಾಡಿದ ಜೆಸ್ಕಾಂನ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಅವರು, ಯಾವ ಊರಿನಲ್ಲಿ ಜಾತಿ-ಜಾತಿ ಎಂದು ಜಗಳವಿಲ್ಲವೋ ಆ ಊರು ಸಂತೋಷದಿಂದ ಕೂಡಿರುತ್ತದೆ. ಮಾನವೀಯತೆಯೇ ಮೊದಲು ಎಂದು ಎಲ್ಲಾ ಧರ್ಮಗಳೂ ಸಾರುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಮತ್ತೊರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೆಸ್ಕಾಂನ ಮಹಿಳಾ ದೂರು ನಿವಾರಣಾ ಕೋಶದ ಅಧ್ಯಕ್ಷ ಎ.ಹೆಚ್. ಮುಮ್ತಾಜ್ ಅವರು ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪಾಯಿ,ಚಂದ್ರಕಾಂತ್ ಪಾಟೀಲ್, ರಾಮಸ್ವಾಮಿ ಎಂ.ಎಲ್, ಶಿವಶಂಕರ್ ಬಿ.ಎಚ್, ಮಹಾಲಕ್ಷ್ಮಿ ಟಿ.ಡಿ., ಬಾಬು ಕೋರೆ, ಶಿವಾನಂದ ತೋಳೆ, ಸಚಿನ್ ಹುಂಡೇಕರ್, ಸಂತೋಷ ವಡ್ಕಿ, ಆತಿಫ್ ಪಾಶಾ, ಸಲೀಂ ಪಾಟೀಲ್ ಸೇರಿದಂತೆ ಕೆಪಿಟಿಸಿಎಲ್ ಮತ್ತು ಜೆಸ್ಕಾಂನ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.





















