ಕೋಲಾರ, ಮೇ.೨೮- ಜಿಲ್ಲೆಯಲ್ಲಿ ಅತಿ ಹೆಚ್ಚು ಕಾನೂನು ಅರಿವು ಕಾರ್ಯಕ್ರನ ನಡೆಸುವ ಮೂಲಕ ಜಿಲ್ಲೆಯನ್ನು ಅಪರಾಧ,ವ್ಯಸನ, ಪ್ಲಾಸ್ಟಿಕ್ ಮುಕ್ತವಾಗಿಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಅವರ ಸೇವೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿನಂದಿಸಿದರು.
ಕೋಲಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿದ್ದು, ಇದೀಗ ತುಮಕೂರು ಜಿಲ್ಲೆಗೆ ಸಿಜೆಎಂ ಆಗಿ ವರ್ಗಾವಣೆಗೊಂಡಿರುವ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಸುನೀಲ ಎಸ್.ಹೊಸಮನಿ ಅವರನ್ನು ಜಿಲ್ಲಾಡಳಿತದಿಂದ ನಗರದ ಜಿಪಂ ಸಭಾಂಗಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಕಾನೂನುಗಳ ಕುರಿತು ಅರಿವು ನೀಡುವ ಪ್ರಯತ್ನದಲ್ಲಿ ಅತಿ ಹೆಚ್ಚು ಶ್ರಮ ಹಾಕಿರುವ ಹೊಸಮನಿ ಅವರು, ಜಿಲ್ಲೆಯಲ್ಲಿ ೭೨೫೦ಕ್ಕೂ ಹೆಚ್ಚು ಕಾನೂನು ಅರಿವು ಕಾರ್ಯಕ್ರಮ ನಡೆಸಿರುವುದು ದಾಖಲೆಯಾಗಿದೆ ಎಂದರು.
ಶಾಲೆ,ಕಾಲೇಜು, ಸಮುದಾಯದ ನಡುವೆ ಇಂತಹ ಶಿಬಿರ ನಡೆಸಿ ಕಾನೂನಿನ ಮಹತ್ವವನ್ನು ತಿಳಿಸಿಕೊಡುವ ಅವರ ಕಾಯಕ ಸ್ಮರಣೀಯವಾಗಿದ್ದು, ಅವರಲ್ಲಿನ ಕ್ರಿಯಾಶೀಲ ವ್ಯಕ್ತಿತ್ವ ಇತರರಿಗೆಲ್ಲಾ ಮಾದರಿಯಾಗಿದೆ ಎಂದು ಅಭಿನಂದಿಸಿದರು.
ಜೈಲಿನ ಖೈದಿಗಳು, ಜಿಲ್ಲೆಯ ಪ್ರತಿ ಶಾಲಾ,ಕಾಲೇಜು ವಿದ್ಯಾರ್ಥಿಗಳು, ನಗರ ಹಳ್ಳಿಗಳಲ್ಲಿ ಸುನಿಲ ಎಸ್.ಹೊಸಮನಿ ಅವರ ಹೆಸರು ಕೇಳಿ ಬರುತ್ತದೆ,ಯಾವುದೇ ವೃತ್ತಿಯನ್ನು ಇಷ್ಟಪಟ್ಟು ಮಾಡಿದರೆ ಸಿಗುವ ತೃಪ್ತಿ ಸಾಮಾನ್ಯವಲ್ಲ, ಅಂತಹ ಕೆಲವೇ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿದ್ದು, ಅವರಿಗೆ ಮತ್ತಷ್ಟು ಉನ್ನತ ಸ್ಥಾನ ಸಿಗಲಿ ಎಂದು ಹಾರೈಸಿದರು.
ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲೇ ಅತಿ ಹೆಚ್ಚು ಕಾನೂನು ಅರಿವು ಕಾರ್ಯಕ್ರಮ ನಡೆಸಿದ್ದೀರಿ, ಗ್ರಾಮ ಪಂಚಾಯಿತಿ,ಶಾಲೆಗಳ ಮೂಲಕ ಸಮಾಜಕ್ಕೆ ಕಾನೂನುಗಳ ಕುರಿತು ತಿಳಿಸಿಕೊಟ್ಟಿದ್ದೀರಿ ನಿಮ್ಮ ಮುಂದಿನ ಹಾದಿ ಮತ್ತಷ್ಟು ಸುಗಮವಾಗಲಿ ನಿಮಗೆ ಇನ್ನಷ್ಟು ಉನ್ನತ ಹುದ್ದೆಗಳು ಲಭಿಸಲಿ ಎಂದು ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ನಿಖಿಲ್ ಮಾತನಾಡಿ, ಜನರಿಗೆ ಕಾನೂನುಗಳ ಕುರಿತು ಅರಿವು ಮೂಡಿಸಿದರೆ ಅಪರಾಧಗಳ ಸಂಖ್ಯೆ ಕಡಿಮೆಯಾಗಿ ಪೊಲೀಸರಿಗೆ ಹೊರೆ ಕಡಿಮೆಯಾಗುತ್ತದೆ, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಬಿರ ನಡೆಸಿ ಅರಿವು ಮೂಡಿಸಿದ್ದೀರಿ, ನಮ್ಮ ಪೊಲೀಸರಿಗೂ ಕಾನೂನಿನ ಮಾಹಿತಿ ನೀಡಿದ್ದೀರಿ ಎಂದು ಧನ್ಯವಾದ ತಿಳಿಸಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರಾದ ಸುನಿಲ್ ಎಸ್.ಹೊಸಮನಿ, ಕೋಲಾರ ಜಿಲ್ಲೆಯಲ್ಲಿ ತಮ್ಮ ಕಾರ್ಯಕ್ಕೆ ಸಿಕ್ಕ ಸಹಕಾರ ನೆನೆದು ಭಾವುಕರಾಗಿ ಮಾತನಾಡಿ, ಇಲ್ಲಿ ಕೆಲಸ ಮಾಡಲು ಕೆಲವರಿಗೆ ಹೆದರಿಕೆ ಇದೆ ಆದರೆ ನನ್ನ ಅವಧಿಯಲ್ಲಿ ಇಲ್ಲಿನ ಜನತೆಯೊಂದಿಗೆ ಒಡನಾಟ, ಕಾನೂನು ಸ್ವಯಂಸೇವಕರ ತಂಡದ ನೆರವು, ಮಧ್ಯಸ್ತಗಾರರ ಕ್ರಿಯಾಶೀಲತೆ ಎಲ್ಲವೂ ನೆರವಿಗೆ ಬಂದಿದೆ ಎಂದು ಸ್ಮರಿಸಿದರು.
ಈ ಎಲ್ಲಾ ಕಾರಣಗಳಿಂದ ಮೂರು ವರ್ಷಗಳಲ್ಲಿ ೨.೮೮ ಲಕ್ಷ ವಾಜ್ಯಪೂರ್ವ ಹಾಗೂ ಚಾಲ್ತಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲು ಸಾಧ್ಯವಾಗಿದೆ, ಅದಾಲತ್‌ನಿಂದ ವಕೀಲರಿಗೆ ಕೇಸ್‌ಗಳು ಕಡಿಮೆಯಾಗುವ ಆತಂಕವಿತ್ತು ಆದರೆ ಭಯ ಬೇಕಿಲ್ಲ ಹೆಚ್ಚಾಗಿದೆ ಎಂದು ಅಂಕಿ ಅಂಶಗಳೊಂದಿಗೆ ವಿವರಿಸಿದರು. ವ್ಯಸನಮುಕ್ತ, ಬಾಲ್ಯ ವಿವಾಹ, ಬಾಲಕಾರ್ಮಿಕತೆ ಮುಕ್ತ ಜಿಲ್ಲೆಯಾಗಿಸುವ ಪ್ರಯತ್ನ ಮಾಡಿದ್ದೇನೆ, ಪ್ಲಾಸ್ಟಿಕ್ ಮುಕ್ತ ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರದ ಈ ವರ್ಷದ ಧ್ಯೇಯವಾಗಿದೆ, ಅದು ಸಾಕಾರಗೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆ,ಕಾಲೇಜುಗಳ ಮುಖ್ಯಶಿಕ್ಷಕರು, ಪ್ರಾಂಶುಪಾಲರು ಪಾಲ್ಗೊಂಡಿದ್ದರು.