Home ಮುಖಪುಟ ಸುದ್ದಿ ಕೈ ನಾಯಕರ ಗುರಿಯಾಗಿರಿಸಿ ಇಡಿ ದಾಳಿ: ಸಿಎಂ. ಕಿಡಿ

ಕೈ ನಾಯಕರ ಗುರಿಯಾಗಿರಿಸಿ ಇಡಿ ದಾಳಿ: ಸಿಎಂ. ಕಿಡಿ

ಬೆಂಗಳೂರು, ಏ. ೨೧- ಕೇಂದ್ರದ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕರನ್ನೆ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಬಿಜೆಪಿ ನಾಯಕರ ವಿರುದ್ಧ ದಾಳಿ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಹಾಗೂ ಅವರ ಪುತ್ರನ ನಿವಾಸಗಳ ಮೇಲೆ ನಡೆದಿರುವ ದಾಳಿ ಬಗ್ಗೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಹಗರಣವಾದರೂ ಕಾಂಗ್ರೆಸ್ ನಾಯಕರ ಮನೆ ಮೇಲೆ ಇ.ಡಿ. ದಾಳಿ ನಡೆಸುತ್ತದೆ. ಬಿಜೆಪಿ ನಾಯಕರ ವಿರುದ್ಧ ದಾಳಿ ನಡೆಸಲ್ಲ ಎಂದು ಟೀಕಿಸಿದರು.


ಚಾಮರಾಜನಗರದಲ್ಲಿ ಹಿಂದೆ ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಆಗಿಲ್ಲದಿರುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಅವರು ಹೇಳಿದರು.


ರಾಜ್ಯದ ಕಾಂಗ್ರೆಸ್ ನಾಯಕರ ವಿರುದ್ಧ ಮುಸ್ಲಿಂ ನಾಯಕರು ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತ ನಾಯಕರ ಸಮ್ಮುಖದಲ್ಲೇ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲಾಗಿತ್ತು. ನಂತರ ಅಲ್ಪಸಂಖ್ಯಾತರ ಮುಖಂಡರು ಪಕ್ಷದ ಪರ ಕೆಲಸ ಮಾಡಿಲ್ಲ ಎಂದು ಕ್ರಮ ಆಗಿದೆ. ಹೈಕಮಾಂಡ್‌ಗೆ ಎಲ್ಲಾ ಮಾಹಿತಿ ಇದೆ ಎಂದು ತಿಳಿಸಿದರು.


ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಎಂದೂ ಮಹಿಳಾ ಮೀಸಲಾತಿ ವಿರೋಧಿಯಲ್ಲ. ಈ ಹಿಂದೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ರಾಜೀವ್‌ಗಾಂಧಿಯವರು ಸಂವಿಧಾನದ ೭೩ ಮತ್ತು ೭೪ನೇ ಪರಿಚ್ಛೇಧಗಳಿಗೆ ತಿದ್ದುಪಡಿ ತಂದಾಗ ಅದನ್ನು ರಾಜ್ಯಸಭೆಯಲ್ಲಿ ವಿರೋಧಿಸಿದವರು ಇದೇ ಎನ್‌ಡಿಎ ಎಂದು ವಾಗ್ದಾಳಿ ನಡೆಸಿದರು.


ಕಾಂಗ್ರೆಸ್ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ. ಕ್ಷೇತ್ರ ಪುನರ್ ವಿಂಗಡಣೆಗೆ ಮಾತ್ರ ನಮ್ಮ ವಿರೋಧ ಎಂದು ಹೇಳಿದರು.
ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದನ್ನು ನಾನು ಸುಳ್ಳು ಮಾಡಿದ್ದೇನೆ. ಹಲವು ಬಾರಿ ನಾನು ಚಾಮರಾಜನಗರಕ್ಕೆ ಬಂದು ಹೋಗಿದ್ದೇನೆ. ಮಲೈಮಹದೇಶ್ವರಬೆಟ್ಟಕ್ಕೂ ಭೇಟಿ ನೀಡಿದ್ದೇನೆ. ಅಧಿಕಾರ ಏನೂ ಹೋಗಿಲ್ಲ. ಇದೆಲ್ಲಾ ಮೌಢ್ಯ ಎಂದು ಹೇಳಿದರು.