
ಯಾದಗಿರಿ:ಮಾ.೨೩: ಸಾಮಾಜಿಕ ಬದ್ಧತೆ, ಬಡತನ ನಿರ್ಮೂಲನೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದತ್ತ ಅಚಂಚಲ ಸೇವೆ ಸಲ್ಲಿಸುತ್ತಿರುವ ಸುರಪುರ ನಗರಸಭೆಯ ಸಮುದಾಯ ಸಂಘಟಕ ದುರಗಪ್ಪ ನಾಯಕ ಅವರಿಗೆ ಪ್ರತಿಷ್ಠಿತ ‘ಕರ್ನಾಟಕ ಭೂಷಣ’ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಸಾಮಾಜಿಕ ವಲಯದಲ್ಲಿ ಹರ್ಷದ ವಾತಾವರಣವನ್ನು ಮೂಡಿಸಿದೆ.
ಸುರಪುರ ನಗರಸಭೆಯ ದೀನದಯಾಳ್ ಆಜೀವಿಕ ಶಹರಿ ಯೋಜನೆಯಡಿ ದೀರ್ಘಕಾಲದಿಂದ ಸಮುದಾಯ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿರುವ ದುರಗಪ್ಪ ನಾಯಕ ಅವರು, ತಮ್ಮ ನಿಷ್ಠಾವಂತ ಸೇವಾ ಮನೋಭಾವ ಮತ್ತು ಜನಪರ ಕಾರ್ಯಚಟುವಟಿಕೆಗಳ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ. ಸರ್ವೆಜನಾಃ ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ ಈ ಗಣ್ಯ ಪ್ರಶಸ್ತಿಗೆ ಅವರು ಆಯ್ಕೆಯಾಗಿರುವುದು ಗಮನಾರ್ಹ ಸಾಧನೆ ಎಂದು ಪರಿಗಣಿಸಲಾಗಿದೆ.
ನಗರ ಬಡತನ ನಿರ್ಮೂಲನಾ ಯೋಜನೆಯಡಿ ಕಳೆದ ಸುಮಾರು ೧೫ ವರ್ಷಗಳಿಂದ ಅವರು ಕೈಗೊಂಡಿರುವ ಸೇವೆಗಳು ಶ್ಲಾಘನೀಯವಾಗಿದ್ದು, ಸ್ವ-ಸಹಾಯ ಸಂಘಗಳ ಸಬಲೀಕರಣ, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಗಳ ವ್ಯವಸ್ಥೆ, ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಣೆಗೆ ಬ್ಯಾಂಕಿAಗ್ ಸಂಪರ್ಕ ಕಲ್ಪಿಸುವುದು ಹಾಗೂ ವಸತಿ ರಹಿತರಿಗಾಗಿ ಆಶ್ರಯ ಸೌಲಭ್ಯ ಒದಗಿಸುವಂತಹ ಅನೇಕ ಸಾಮಾಜಿಕ ಹಿತಚಟುವಟಿಕೆಗಳಲ್ಲಿ ಅವರು ಸಕ್ರಿಯ ಪಾತ್ರವಹಿಸಿದ್ದಾರೆ.
ಈ ಸಾಧನೆಯ ಮೂಲಕ ದುರಗಪ್ಪ ನಾಯಕ ಅವರು ನಗರಸಭೆಗೆ ಕೀರ್ತಿ ತಂದುಕೊಟ್ಟಿದ್ದು, ಅವರ ಸೇವಾ ಚಿಂತನೆ ಮತ್ತು ಕಾರ್ಯನಿಷ್ಠೆ ಸಮಾಜಕ್ಕೆ ಮಾದರಿಯಾಗಿದೆ ಎಂದು ನಗರಸಭೆ ಕಚೇರಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಲಭಿಸಿರುವ ಹಿನ್ನೆಲೆ, ಕಕ್ಕೇರಾ ಪುರಸಭೆಯ ಸಮುದಾಯ ಸಂಘಟಕರಾದ ತಿಪ್ಪಮ್ಮ ಬಿರಾದಾರ, ಸುರಪುರ ನಗರಸಭೆ ಡೇ-ನಲ್ಮ್ ಶಾಖೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀದೇವಿ ಹಿರೇಮಠ ಹಾಗೂ ಕುಮಾರಿ ಗೀತಾ ಸೇರಿದಂತೆ ಹಲವರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ಕೌಶಲ್ಯ ಮಿಷನ್ ಯಾದಗಿರಿ ಸಹಾಯಕ ನಿರ್ದೇಶಕ ಬಸಪ್ಪ ತಳವಡಿ, ಅಭಿಯಾನ ವ್ಯವಸ್ಥಾಪಕರಾದ ವಿಠೋಬ ಯಾದವ, ವಿಜಯಕುಮಾರ ಪಾಟೀಲ, ಸಹಾಯಕ ಸಾಂಖ್ಯಿಕ ಅಧಿಕಾರಿ ರಂಗಪ್ಪ ಮಾಲಿ ಪಾಟೀಲ್ ಹಾಗೂ ಸಿಬ್ಬಂದಿ ವರ್ಗ, ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಭೀಮಾಶಂಕರ ಮತ್ತು ನಗರ ವಸತಿ ಆಶ್ರಯ ಕೇಂದ್ರದ ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಿ ಅವರುಗಳೂ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಸಮುದಾಯ ಸೇವೆಯನ್ನು ಜೀವನ ಧ್ಯೇಯವನ್ನಾಗಿಸಿಕೊಂಡ ದುರಗಪ್ಪ ನಾಯಕ ಅವರ ಈ ಸಾಧನೆ, ಇತರರಿಗೆ ಪ್ರೇರಣೆಯಾಗಿ ಪರಿಣಮಿಸುವುದರಲ್ಲಿ ಸಂಶಯವೇ ಇಲ್ಲ.


























