ಇಂಡೊ-ಪಾಕ್ ಹೈವೋಲ್ಟೇಜ್ ಕದನಕ್ಕೆ ದುಬೈ ಸಜ್ಜು: ಟಿ.೨೦ ಏಷ್ಯಾಕಫ್

ದುಬೈ, ಸೆಪ್ಟೆಂಬರ್ ೧೩: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ ಟಿ೨೦ ಕ್ರಿಕೆಟ್ ಟೂರ್ನಿಯ ಹೈವೋಲ್ಟೇಜ್ ಕದನಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ.

ನಾಳೆ ನಡೆಯಲಿರುವ ಪಂದ್ಯದ ವೀಕ್ಷಣೆಗೆ ಉಭಯ ದೇಶಗಳಲ್ಲದೆ, ಇತರ ದೇಶಗಳ ಸಾವಿರಾರೂ ಅಭಿಮಾನಿಗಳು ಕೂಡ ಕಾತರದಿಂದ ಎದುರುನೋಡುತ್ತಿದ್ದಾರೆ.
ಎ ಗುಂಪಿನಲ್ಲಿರುವ ಭಾರತ ತಂಡ, ತನ್ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ಯುಎಇ ತಂಡವನ್ನು ಮಣಿಸಿ ಭರ್ಜರಿ ಆರಂಭ ಮಾಡಿದೆ. ಹಾಗೆಯೇ ಪಾಕಿಸ್ತಾನ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಒಮನ್ ತಂಡವನ್ನು ಸೋಲಿಸಿ ಭಾರತದ ಸವಾಲಿಗೆ ಸಜ್ಜಾಗಿದೆ.

ಉಭಯ ತಂಡಗಳ ಬಲಾಬಲ ಮತ್ತು ದೌರ್ಬಲ್ಯಗಳನ್ನು ಗಮನಿಸಿದರೆ, ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ವರ್ಷದ ಟಿ೨೦ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಭಾರತ, ಈ ವರ್ಷದ ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಪಾಕಿಸ್ತಾನ ತಂಡವನ್ನು ಹೆಡೆಮುರಿಗೆ ಕಟ್ಟಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಸಾರಥ್ಯದ ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧದ ಮೇಲುಗೈ ಮುಂದುವರಿಸಲು ಎದುರು ನೋಡುತ್ತಿದೆ.

ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಹಲವು ವರ್ಷಗಳಿಂದ ದ್ವಿಪಕ್ಷೀಯ ಸರಣಿಯಿಂದ ದೂರ ಉಳಿದಿರುವ ಭಾರತ-ಪಾಕಿಸ್ತಾನ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಐಸಿಸಿಯ ಬಹುತೇಕ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಪ್ರಭುತ್ವ ಸಾಧಿಸಿರುವ ಭಾರತ, ಏಷ್ಯಾಕಪ್ ನಲ್ಲೂ ಪಾರಮ್ಯ ಮೆರೆಯುವ ನಿರೀಕ್ಷೆಯಲ್ಲಿದೆ.
ಪಹಲ್ಗಾಮ್ ದಾಳಿ ಬಳಿಕ ಮೊದಲ ಮುಖಾಮುಖಿ

ಪಹಲ್ಗಾಮ್ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ಮೊದಲ ಸಲ ಕ್ರಿಕೆಟ್ ಪಂದ್ಯದಲ್ಲಿ ಎದುರಾಗುತ್ತಿವೆ. ಇದು ಪಂದ್ಯದ ತೀವ್ರತೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಪಂದ್ಯಕ್ಕೆ ಹಲವರಿಂದ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರ ಕ್ರೀಡೆಯನ್ನು ಸಂಘರ್ಷದಿಂದ ಹೊರಗಿಡುವ ನಿಲುವು ತೆಳೆದಿದೆ.
ಭಾರತ ಏಷ್ಯ ಕಪ್ ನಲ್ಲಿ ೮ ಬಾರಿ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ ೨ ಬಾರಿ ಮಾತ್ರ ಪ್ರಶಸ್ತಿ ಗೆದ್ದಿದೆ.

ಪಂದ್ಯ ಆರಂಭ (ಸೆ.೧೪): ರಾತ್ರಿ ೮ಕ್ಕೆ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ನೇರ ಪ್ರಸಾರ: ಸೋನಿ ನೆಟ್ ವರ್ಕ್

೧೩, ಟಿ೨೦ ಮಾದರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ ೧೩ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಬಾಕಿ ಭಾರತ ೯ರಲ್ಲಿ ಜಯ ಗಳಿಸಿ, ೩ರಲ್ಲಿ ಸೋಲು ಕಂಡಿದೆ. ೧ ಪಂದ್ಯ ಟೈ ಆಗಿದೆ.

೧೯, ಏಷ್ಯಾಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಒಟ್ಟು ೧೯ ಬಾರಿ ಪರಸ್ಪರ ಎದುರಾಗಿವೆ. ಈ ಪೈಕಿ ೧೦ರಲ್ಲಿ ಭಾರತ ಗೆದ್ದರೆ, ೬ರಲ್ಲಿ ಪಾಕಿಸ್ತಾನ ಜಯ ಗಳಿಸಿದೆ. ಉಳಿದ ೩ ಪಂದ್ಯಗಳು ರದ್ದುಗೊಂಡಿವೆ.

ಸಂಭಾವ್ಯ ತಂಡಗಳು
ಭಾರತ: ಅಭಿಷೇಕ್ ಶರ್ಮ, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ ಪ್ರಿತ್ ಬುಮ್ರಾ
ಪಾಕಿಸ್ತಾನ: ಸಾಹೀಬ್ ಜಾದಾ ಫರ್ಹಾನ್, ಸಯಿಮ್ ಆಯುಬ್, ಫಖರ್ ಜಮಾನ್, ಸಲ್ಮಾನ್ ಅಲಿ ಅಘ(ನಾಯಕ), ಹಸನ್ ನವಾಜ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಫಾಹೀಮ್ ಆಶ್ರಫ್, ಶಾಹೀನ್ ಆಫ್ರಿದಿ, ಹ್ಯಾರಿಸ್ ರೌಫ್, ಅಬ್ರಾ.