ಡಾ. ಅಬ್ದುಲ್ ಖದೀರ್‍ಗೆ ಎ.ಎಂ.ಯು. ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೀದರ್:ಅ.19: ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರಿಗೆ ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ 2025ನೇ ಸಾಲಿನ ಸರ್ ಸೈಯದ್ ನ್ಯಾಷನಲ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಸರ್ ಸೈಯದ್ ಅಹಮ್ಮದ್ ಖಾನ್ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ಶಹೀದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ರೂ. 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಬಿ.ಇ. ಸಿವಿಲ್ ಎಂಜಿನಿಯರ್ ಆಗಿರುವ ಡಾ. ಅಬ್ದುಲ್ ಖದೀರ್ ಅವರು 17 ವಿದ್ಯಾರ್ಥಿಗಳೊಂದಿಗೆ ಬೀದರ್‍ನಲ್ಲಿ ಆರಂಭಿಸಿದ ಶಾಹೀನ್ ಶಿಕ್ಷಣ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದೆ. ದೇಶದ 16 ರಾಜ್ಯಗಳಲ್ಲಿ 110 ಶಾಖೆಗಳನ್ನು ಹೊಂದಿದೆ. ಸಂಸ್ಥೆಯ ಶಾಖೆಗಳಲ್ಲಿ 45 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿರುವ ಹಿರಿಮೆ ಸಂಸ್ಥೆಯದ್ದಾಗಿದೆ. ಒಂದು ಮನೆಯಲ್ಲಿ ಮೂವರು ಮಕ್ಕಳು ವೈದ್ಯರಾದ 300 ನಿದರ್ಶನಗಳು ಸಂಸ್ಥೆಯಲ್ಲಿವೆ. ಮದರಸಾ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿಯೂ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ.
ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅಬ್ದುಲ್ ಖದೀರ್ ಅವರಿಗೆ ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯದ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಅಬ್ದುಲ್ ಖದೀರ್ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಉರ್ದು ಅಕಾಡೆಮಿ ಪ್ರಶಸ್ತಿ, ಶಾಹೀನ್ ಶಿಕ್ಷಣ ಸಂಸ್ಥೆಗೆ ಕರ್ನಾಟಕ ರಾಜ್ಯೋತ್ಸವ ಸೇರಿ ಅನೇಕ ಪ್ರಶಸ್ತಿ- ಸಮ್ಮಾನಗಳು ಸಂದಿವೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ನೈಮಾ ಖಾತೂನ್, ಹಿರಿಯ ಅಧಿಕಾರಿಗಳು, ಗಣ್ಯರು ಹಾಜರಿದ್ದರು.