
ನವದೆಹಲಿ, ಮಾ ೨೨: ಕಳೆದ ವರ್ಷ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ವಿಧಿಸಿದ್ದ ದೇಶೀಯ ವಿಮಾನ ದರಗಳ ಮೇಲಿನ ತಾತ್ಕಾಲಿಕ ಶುಲ್ಕ ಮಿತಿಗಳನ್ನು ಕೇಂದ್ರ ಸರ್ಕಾರ ಇದೀಗ ತೆಗೆದು ಹಾಕಿದೆ. ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿ, ವಿಮಾನ ದರ ಮಿತಿಗಳನ್ನು ತೆಗೆದುಹಾಕಲಾಗಿದೆ. ನಾಳೆಯಿಂದಲೇ ಇದು ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರೀ ಪ್ರಮಾಣದ ಅಡಚಣೆಯಾದ ಸಂದರ್ಭದಲ್ಲಿ ಕೆಲವು ವಿಮಾನಯಾನ ಸಂಸ್ಥೆಗಳು ಟಿಕೆಟ್ ದರಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದ್ದವು. ಇದರಿಂದ ಪ್ರಯಾಣಿಕರಿಗೆ ತೀವ್ರ ಹೊರೆಯಾಗಿ, ತೊಂದರೆ ಅನುಭವಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ನಾಗರಿಕ ವಿಮಾನಯಾನ ಸಚಿವಾಲಯ ಟಿಕೆಟ್ ದರ ಏರಿಕೆಗೆ ಕಡಿವಾಣ ಹಾಕಿತ್ತು.
ದೇಶೀಯ ಆರ್ಥಿಕ ವಿಮಾನ ದರಗಳ ಮೇಲಿನ ದೂರ ಆಧರಿತ ಮಿತಿಗಳು ೭,೫೦೦ (೫೦೦ ಕಿ.ಮೀ.ಗಿಂತ ಕಡಿಮೆ) ರೂ.ಯಿಂದ ೧೮,೦೦೦ (೧,೫೦೦ ಕಿ.ಮೀ.ಗಿಂತ ಹೆಚ್ಚು) ರೂ.ವರೆಗಿದ್ದವು. ಆದರೆ ಈಗ ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯಾಚರಣೆಯ ಅಡಚಣೆಗಳನ್ನು ಎದುರಿಸುತ್ತಿವೆ. ಈ ಸಮಯದಲ್ಲಿ ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗಳ ನೆರವಿಗೆ ಬಂದಿದೆ. ಪ್ರಸ್ತುತ ಆದೇಶದಲ್ಲಿ, ವಿಮಾನಯಾನ ಸಂಸ್ಥೆಗಳು ಬೆಲೆಯ ವಿಚಾರದಲ್ಲಿ ಶಿಸ್ತು ಪಾಲಿಸಿ, ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದೂ ಸೂಚನೆ ನೀಡಿದೆ.
ದರಗಳು ಸಮಂಜಸ, ಪಾರದರ್ಶಕ ಮತ್ತು ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿರುವುದನ್ನು ವಿಮಾನಯಾನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಪ್ರಯಾಣಿಕರ ಹಿತಾಸಕ್ತಿಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರದಂತೆ ಗಮನಹರಿಸಬೇಕು ಎಂದು ಸಚಿವಾಲಯ ಸಲಹೆ ಕೊಟ್ಟಿದೆ.
ವಿಶೇಷವಾಗಿ ಗರಿಷ್ಠ ಬೇಡಿಕೆ, ಅಡೆತಡೆಗಳು ಅಥವಾ ತುರ್ತು ಪರಿಸ್ಥಿತಿಗಳ ಅವಧಿಯಲ್ಲಿ ದರಗಳಲ್ಲಿ ಅತಿಯಾದ ಏರಿಕೆಯ ನಿದರ್ಶನಗಳನ್ನು ಗಮನಿಸಿದರೆ ಅಂಥವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.
ಇತ್ತೀಚಿಗೆ ರಾಜೀನಾಮೆ ನೀಡಿದ್ದ ಇಂಡಿಗೋ ಸಿಇಒ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಭಾರಿ ಕಾರ್ಯಾಚರಣೆಯ ತೊಡಕುಗಳನ್ನು ಎದುರಿಸಿದ ಮೂರು ತಿಂಗಳ ನಂತರ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಇತ್ತೀಚಿಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಇಂಟರ್‌ಗ್ಲೋಬ್ ಏವಿಯೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಏರ್‌ಲೈನ್‌ನ ನಿರ್ವಹಣೆಯ ಜವಾಬ್ದಾರಿಯನ್ನು ಮಧ್ಯಂತರ ಆಧಾರದ ಮೇಲೆ ವಹಿಸಿಕೊಂಡಿದ್ದಾರೆ ಎಂದು ಏರ್‌ಲೈನ್ ತಿಳಿಸಿತ್ತು. ತಕ್ಷಣದಿಂದಲೇ ಜಾರಿಗೆ ಬರುವಂತೆ ಪೀಟರ್ ಎಲ್ಬರ್ಸ್ ಇಂಡಿಗೋ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಪೀಟರ್ ಸಂಸ್ಥೆಗೆ ನೀಡಿದ ಕೊಡುಗೆ ಮತ್ತು ಸೇವೆಗೆ ನಿರ್ದೇಶಕರ ಮಂಡಳಿಯು ಧನ್ಯವಾದಗಳನ್ನು ಅರ್ಪಿಸುತ್ತದೆ ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿತ್ತು.





























