
ಬೆಂಗಳೂರು, ಮಾ. ೧೧- ಅಡುಗೆ ಅನಿಲ ಸಿಲಿಂಡರ್ ಪೂರೈಕೆಯ ವ್ಯತ್ಯಯಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂಬ ಆಡಳಿತ ಪಕ್ಷದ ಸದಸ್ಯರ ಮಾತು ವಿಧಾನಸಭೆಯಲ್ಲಿಂದು ದೊಡ್ಡ ಮಟ್ಟದ ಕಿಚ್ಚಿಗೆ ಕಾರಣವಾಗಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ಮಾತಿನ ಚಕಮಕಿ, ವಾಗ್ವಾದಕ್ಕೆ ಇಳಿದಿದ್ದು, ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಳ್ಳಲು ಕಾರಣವಾಯಿತು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಹೆಚ್.ಡಿ. ರಂಗನಾಥ್ ಅವರು, ಅಡುಗೆ ಅನಿಲ ಸಿಲಿಂಡರ್ ವ್ಯತ್ಯಯದ ಬಗ್ಗೆ ಪ್ರಸ್ತಾಪಿಸಿ, ವಾಣಿಜ್ಯ ಬಳಕೆ ಸಿಲಿಂಡರ್‌ಗಳು ಸಿಗುತ್ತಿಲ್ಲ. ಕೆಲವೆಡೆ ದುಪ್ಪಟ್ಟು ಬೆಲೆಯಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಸಿಲಿಂಡರ್ ಒದಗಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಪ್ರಶ್ನೆ ಕೇಳಿದ್ದರು.
ಆ ಹಂತದಲ್ಲಿ ಆಹಾರ ಸಚಿವರು ಸದನದಲ್ಲಿ ಇಲ್ಲದ ಕಾರಣ ಸಭಾಧ್ಯಕ್ಷರು ಆಹಾರ ಸಚಿವರಿಂದ ಉತ್ತರ ಕೊಡಿಸುವುದಾಗಿ ಹೇಳುವಷ್ಠರಲ್ಲಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸದನಕ್ಕೆ ಆಗಮಿಸಿ, ಈಗತಾನೆ ತೈಲ ಕಂಪನಿಗಳ ಜತೆ ಸಭೆ ನಡೆಸಿದ್ದೇನೆ. ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಯಾವುದೇ ತೊಂದರೆ ಇಲ್ಲ.
ಗ್ರಾಹಕರು ಸಿಲಿಂಡರ್ ಬಳಕೆಯಲ್ಲಿ ಮಿತವ್ಯಯ ಮಾಡಬೇಕು ಎಂದು ಹೇಳಿದಾಗ, ಕಾಂಗ್ರೆಸ್‌ನ ರಂಗನಾಥ್ ಅವರು, ಸಿಲಿಂಡರ್ ಕೊರತೆಗೆ ಕೇಂದ್ರದ ಕೆಟ್ಟ ವಿದೇಶಾಂಗ ನೀತಿಯೇ ಕಾರಣ ಎಂದು ಹೇಳಿದ್ದು, ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ, ಒಮ್ಮೆಲೆ ಬಿಜೆಪಿಯ ಎಲ್ಲ ಸದಸ್ಯರು ಎದ್ದು ನಿಂತು ಈ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಯುದ್ಧ ನಡೆಯುತ್ತಿದೆ. ಇದರಿಂದ ಸಿಲಿಂಡರ್ ಕೊರತೆಯಾಗಿದೆ. ಎಲ್ಲದಕ್ಕೂ ಕೇಂದ್ರವನ್ನು ದೂಷಿಸುವುದು ಸರಿಯಲ್ಲ. ಪ್ರಧಾನಿ ಮೋದಿ ಅವರ ಹೆಸರೆಳದಿದ್ದರೆ ಕಾಂಗ್ರೆಸ್‌ನವರಿಗೆ ತಿಂದಿದ್ದು ಜೀರ್ಣ ಆಗಲ್ಲ ಎಂದು ಏ ರಿದ ಧ್ವನಿಯಲ್ಲಿ ಹೇಳಿದರು.
ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತ್ತು. ಈ ಗದ್ದಲದಲ್ಲೇ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರದ ನಗರಾಭಿವದ್ಧಿ ಸಚಿವರಾದ ಹರ್ದಿಪ್ ಸಿಂಗ್ ಫೆಬ್ರವರಿ ೯ ರಂದು ಸಿಲಿಂಡರ್‌ಗೆ ಯಾವುದೇ ಕೊರತೆ ಇಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ಮಧ್ಯೆ ಅಡುಗೆ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿತು. ಸಿಲಿಂಡರ್ ಕೊರತೆ ಇಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ ನಿನ್ನೆ ಎಸ್ಮಾ ಜಾರಿ ಮಾಡಿರುವುದೇ ಬಿಕ್ಕಟ್ಟು ಇರುವುದನ್ನು ತೋರಿಸುತ್ತದೆ. ಇದರಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ಸದನದಲ್ಲಿ ಸುಳ್ಳು ಹೇಳಿದವರು ಯಾರು. ಆತಂಕ ಇಲ್ಲ ಎಂದು ಕೇಂದ್ರ ಎಸ್ಮಾ ಜಾರಿ ಮಾಡಿದ್ದು ಏಕೆ ಎಂದು ಏ ರು ದ್ವನಿಯಲ್ಲಿ ಪ್ರಶ್ನಿಸಿದರು.
ಸಚಿವರ ಮಾತಿಗೆ ಕೆರಳಿದ ಬಿಜೆಪಿ ಸದಸ್ಯರು ಪ್ರಿಯಾಂಕ ವಿರುದ್ಧ ಮುಗಿ ಬಿದ್ದರು. ಇದರಿಂದ ಸದನದಲ್ಲಿ ಗದ್ದಲ ಮತ್ತಷ್ಟು ಹೆಚ್ಚಾಯಿತು.
ಈ ಗದ್ದಲದಲ್ಲೇ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ವಿದೇಂಶಾಂಗ ನೀತಿ, ಆರ್ಥಿಕ ನೀತಿ ಏನಾಗಿದೆ ಎಂಬುದೆಲ್ಲಾ ಗೊತ್ತಾಗಿದೆ. ಮೋದಿ ಅವರು ಮಾತೆತ್ತಿದರೆ ಟ್ರಂಪ್ ನನ್ನ ಬೆಸ್ಟ್ ಫ್ರೆಂಡ್ ಏಂದು ಹೇಳುತ್ತಾರೆ ಆಗಿರುವುದಾದರೂ ಏನು, ಎಸ್ಮಾ ಜಾರಿಯಾದರೆ ಮೋದಿ ಏಕೆ ಬಾಯಿ ಬಿಡುತ್ತಿಲ್ಲ. ಎಸ್ಮಾ ಜಾರಿ ಮಾಡುವ ಅಗತ್ಯ ಇತ್ತೆ. ಇದರಿಂದ ನಿಮ್ಮ ಯೋಗ್ಯತೆ ಗೊತ್ತಾಗುತ್ತದೆ ಎಂದು ಹೇಳಿದ್ದು, ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿ ಪ್ರಿಯಾಂಕ ವಿರುದ್ಧ ಮುಗಿಬಿದ್ದು, ಪ್ರಿಯಾಂಕ ಮಾತಿಗೆ ತಿರುಗೇಟು ನೀಡಿದರು.
ಆಗ ಸದನದಲ್ಲಿ ಗದ್ದಲ ತಾರಕಕ್ಕೇರಿ, ಕೋಲಾಹಲದ ಪರಿಸ್ಥಿತಿ ನಿರ್ಮಾಣಗೊಂಡಿತು.
ಈ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿದರು. ಆಗ ಪರಿಸ್ಥಿತಿ ಸ್ವಲ್ಪ ತಣ್ಣಗಾಗಿ ಮುಖ್ಯಮಂತ್ರಿಗಳು ಮಾತು ಆರಂಭಿಸಿ, ಶೂನ್ಯ ವೇಳೆಯಲ್ಲಿ ಎಲ್ಲರೂ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವರು ಆತಂಕ ಇಲ್ಲ ಎಂದು ಹೇಳಿದ್ದನ್ನು ಪ್ರಿಯಾಂಕ ಹೇಳಿದ್ದಾರೆ. ಆತಂಕ ಇಲ್ಲದಿದ್ದರೆ ಎಸ್ಮಾ ಜಾರಿ ಮಾಡಿದ್ದು ಸರಿನೇ. ಇಲ್ಲವೆ ನಾವು ರಾಜಕಾರಣ ಮಾಡುತ್ತಿಲ್ಲ. ಸುಮ್ಮನೆ ಏನೆನೋ ಮಾತನಾಡಬೇಡಿ ಎಂದು ಪ್ರತಿಪಕ್ಷ ಸದಸ್ಯರಿಗೆ ಹೇಳಿದರು.
ಆಗ ಬಿಜೆಪಿಯ ಸುನಿಲ್‌ಕುಮಾರ್ ಎದ್ದು ನಿಂತು, ಯುದ್ಧದ ಸಂದರ್ಭದಲ್ಲಿ ನೀವು ಈ ರೀತಿ ಮಾತನಾಡಬಾರದು. ಯುದ್ಧದ ಕಾರಣ ಅಡುಗೆ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಆಹಾರ ಸಚಿವರು ಸರಿಯಾಗಿ ಉತ್ತರಿಸುತ್ತಿದ್ದರು. ಆದರೆ ಕಾಂಗ್ರೆಸ್‌ನ ಕೆಲ ಸದಸ್ಯರು ಅದನ್ನು ರಾಜಕಾರಣ ಮಾಡಿದ್ದಾರೆ. ಕೇಂದ್ರದ ಯೋಗ್ಯತೆ ಬಗ್ಗೆ ಮಾತನಾಡುವ ನಿಮಗೆ ಸರ್ವರ್ ಸಮಸ್ಯೆ ಬೆಗೆಹರಿಸಲು ಆಗಿಲ್ಲ. ಮಲೆನಾಡಿನಲ್ಲಿ ಮರಳು ಕೊರತೆ ಇದೆ ಅದನ್ನು ಸರಿಯಾಗಿ ಬಗೆಹರಿಸಲು ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡುವ ಯೋಗ್ಯತೆ ನಿಮಗೆ ಇದೆಯೇ ಎಂದರು.
ಆಗ ಮತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲದ ವಾತಾವರಣ ರೂಪುಗೊಂಡಿತು.
ದೇಶದ ಯಾವುದೇ ಭಾಗದಲ್ಲೂ ಸಮಸ್ಯೆ ಇಲ್ಲ. ರಾಜ್ಯದಲ್ಲೇ ಅಡುಗೆ ಅನಿಲದ ಸಮಸ್ಯೆ ಇದೆ ಎಂದು ಬಿಜೆಪಿಯ ಸುನಿಲ್ ಹೇಳಿದ್ದು ಮತ್ತಷ್ಟು ವಾಗ್ವಾದಕ್ಕೆ ಕಾರಣವಾಯಿತು.
ಆಗ ಮುಖ್ಯಮಂತ್ರಿಗಳು ಎಸ್ಮಾ ಜಾರಿ ಮಾಡಿದ್ದು ಏಕೆ ಆ ಬಗ್ಗೆ ಮಾತನಾಡಿ ಸಮಸ್ಯೆ ಇರದಿದ್ದರೆ ಎಸ್ಮಾ ಜಾರಿ ಮಾಡುತ್ತಿದ್ದರಾ ಎಂದು ಹೇಳಿದರು.
ಈ ಹಂತದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸದನಕ್ಕೆ ಆಗಮಿಸಿ, ಅಡುಗೆ ಅನಿಲ ವಿಚಾರದಲ್ಲಿ ರಾಜಕಾರಣ ಸರಿಯಲ್ಲ. ಮುಖ್ಯಮಂತ್ರಿಗಳೆ ಚಳವಳಿ ಮಾಡಿ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಸ್ನಿಸಿದರು.
ಈ ಹಂತದಲ್ಲಿ ಅಶೋಕ್ ಹಾಗೂ ಸಿದ್ದರಾಮಯ್ಯ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದವೂ ನಡೆಯಿತು.
ಶೂನ್ಯ ವೇಳೆಯಲ್ಲಿ ಆಡಳಿತ ಪಕ್ಷದವರು ಅದರಲ್ಲೂ ಸಚಿವ ಪ್ರಿಯಾಂಕ ಅವರು ರಾಜಕಾರಣ ಮಾಡುತ್ತಿದ್ದಾರೆ. ನೀವು ಅವರನ್ನು ನಿಯಂತ್ರಿಸಿ ಇಲ್ಲದಿದ್ದರೆ ನಾವು ಧರಣಿ ಮಾಡಬೇಕಾಗುತ್ತದೆ ಎಂದು ಅಶೋಕ್ ಹೇಳಿದರು
ಈ ಹಂತದಲ್ಲಿ ಮತ್ತೆ ಇದಕ್ಕೆ ದ್ವನಿಗೂಡಿಸಿದ ಬಿಜೆಪಿಯ ಆರ್. ಅಶೋಕ್, ಸಭಾಧ್ಯಕ್ಷರೇ ಶೂನ್ಯ ವೇಳೆಯಲ್ಲಿ ಇಷ್ಟೊಂದು ಚರ್ಚೆಗೆ ಅವಕಾಶ ನೀಡುವುದು ಸರಿಯಲ್ಲ ಇವರು ಬೇಕಾದರೆ ಮೋದಿ ಹಾಗೂ ಬಿಜೆಪಿ ವಿರೋಧಿ ಗುಂಪಿಗೆ ಮುಖ್ಯಸ್ಥರನ್ನಾಗಿ ಮಾಡಿಬಿಡಿ. ಆಗ ಪ್ರಿಯಾಂಕ, ಹೌದು ರೀ ನಾವು ಹಾಗೆ ಮಾತನಾಡುವುದು ಎಂದು ಅಶೋಕ್ ಅವರಿಗೆ ತಿರುಗೇಟು ನೀಡಿದಾಗ ಮತ್ತೆ ಸದನದಲ್ಲಿ ಗದ್ದಲ ತಾರಕ್ಕಕ್ಕೇರಿತು.
ನಂತರ ಸಭಾಧ್ಯಕ್ಷ ಯು.ಟಿ.ಖಾದರ್ ಗದ್ದಲವನ್ನು ನಿಯಂತ್ರಿಸಿ, ಆಹಾರ ಸಚಿವ ಮುನಿಯಪ್ಪ ಅವರಿಗೆ ಉತ್ತರ ನೀಡಲು ಸೂಚಿಸಿ, ಗದ್ದಲವನ್ನು ನಿಯಂತ್ರಿಸಿದರು.
ಆತಂಕಪಡುವ ಅಗತ್ಯವಲ್ಲ: ಕೆಎಚ್‌ಎಂ
ರಾಜ್ಯದಲ್ಲಿ ಪ್ರತಿ ಕುಟಂಬಕ್ಕೆ ತಿಂಗಳಿಗೆ ಒಂದು ಅಡುಗೆ ಅನಿಲದ ಸಿಲಿಂಡರ್‌ನ್ನು ಗೃಹ ಬಳಕೆ ನೀಡಲಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
ಶೂನ್ಯ ವೇಳೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊರತೆಯ ಪ್ರಸ್ತಾಪಕ್ಕೆ ಉತ್ತರ ನೀಡಿದ ಅವರು, ನಾನು ಇಂದು ಎಲ್ಲ ಆಯಿಲ್ ಕಂಪನಿಗಳ ಮುಖ್ಯಸ್ಥರ ಜತೆ ಸಭೆ ಮಾಡಿದ್ದೇನೆ ಅವರುಗಳು ಗೃಹ ಬಳಕೆಯ ಸಿಲಿಂಡರ್‌ನಲ್ಲಿ ಕೊರತೆ ಇಲ್ಲ ತಿಂಗಳಿಗೆ ಒಂದು ಸಿಲಿಂಡರ್ ಪ್ರತಿ ಕುಟುಬಕ್ಕೆ ನೀಡುತ್ತೇವೆ ಎಂದು ಹೇಳಿದ್ದಾರೆ ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಯುದ್ಧದ ಸಂದರ್ಭದಲ್ಲಿ ನಾವೆಲ್ಲಾರೂ ಸಹಕರಿಸಬೇಕಾಗುತ್ತದೆ. ವಾಣಿಜ್ಯ ಸಿಲಿಂಡರ್ ಸಮಸ್ಯೆಯಿಂದ ಹೋಟೆಲ್‌ನವರಿಗೆ ಕಷ್ಟ ಆಗಬಹುದು ಅವರೂ ಸಹಕರಿಸಬೇಕು ಎಂದರು.
ಗೃಹ ಬಳಕೆಯ ಸಿಲಿಂಡರ್ ಜತೆಗೆ ಆಸ್ಪತ್ರೆ, ಶಾಲೆ ಹಾಸ್ಟೆಲ್‌ಗಳಿಗೂ ಸಿಲಿಂಡರ್ ಒದಗಿಸುವ ಭರವಸೆಯನ್ನು ಆಯಿಲ್ ಕಂಪನಿಗಳು ನೀಡಿದ್ದಾರೆ. ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ದೇಶದ ಇಂತಹ ಪರಿಸ್ಥಿತಿಯಲ್ಲಿ ಸಹಕರಿಸಬೇಕು ಮಿತವ್ಯಯದಿಂದ ಸಿಲಿಂಡರ್‌ಗಳನ್ನು ಬಳಸಬೇಕಾಗುತ್ತದೆ ಎಂದು ಅವರು ಹೇಳಿದರು
ಸಿದ್ದು- ಅಶೋಕ್ ಜಟಾಪಟಿ
ಅಡುಗೆ ಅನಿಲ ಸಿಲಿಂಡರ್ ಸರಬರಾಜಿನ ವ್ಯತ್ಯಕ್ಕೆ ಸಂಬಂಧಿಸಿದಂತೆ ಮುಷ್ಕರ, ಚಳವಳಿ ನಡೆಸುವಂತೆ ಮುಖ್ಯಮಂತ್ರಿಗಳೇ ಪ್ರಚೋದನೆ ನೀಡಿದ್ದಾರೆ ಎಂಬ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಮಾತು ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕರ ನಡುವೆ ನೇರ ವಾಗ್ವಾದಕ್ಕೆ ಕಾರಣವಾಯಿತು.
ಶೂನ್ಯ ವೇಳೆಯಲ್ಲಿ ಅಡುಗೆ ಸಿಲಿಂಡರ್ ವ್ಯತ್ಯಯದ ಬಗ್ಗೆ ಕೇಳಲಾದ ಪ್ರಶ್ನೆ ಸಂದರ್ಭದಲ್ಲಿ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ನಡೆದ ವಾಗ್ವಾದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಅಶೋಕ್ ಅವರು, ಚಳವಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಪ್ರಚೋದನೆ ಕೊಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಚಳವಳಿಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ನಾನು ಮುಷ್ಕರಕ್ಕೆ ಬೆಂಬಲ ನೀಡಿಲ್ಲ ಎಂದು ಹೇಳಿದರು, ಅದನ್ನು ಲೆಕ್ಕಿಸಿದ ಅಶೋಕ್ ನೀವು ಬೆಂಬಲ ಕೊಟ್ಟಿದ್ದೀರಿ ಚಳವಳಿ ಮಾಡಿ ಎಂದು ಹೇಳಿದ್ದೀರಿ ನಾನು ಮಾಧ್ಯಮದಲ್ಲಿ ನೋಡಿದ್ದೇನೆ ಎಂದು ಹೇಳಿ ಈ ರೀತಿ ನೀವು ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದರು.
ಆಗ ಸಿದ್ಧರಾಮಯ್ಯ ಅವರು ಮಾಧ್ಯಮದವರು ಹೋಟೆಲ್ ಉದ್ಯಮವದ ಸಿಲಿಂಡರ್ ಸಿಕ್ಕಿಲ್ಲ ಎಂದು ಮಷ್ಕರ ಮಾಡುತ್ತಿದ್ದಾರೆ ಎಂದು ಕೇಳಿದ್ದರು ಅದಕ್ಕೆ ನಾನು ಅದು ಸರಿ ಇದೆ ಎಂದಷ್ಟೇ ಹೇಳಿದ್ದೆ ಮುಷ್ಕರಕ್ಕೆ ಪ್ರಚೋದೆ ಮಾಡಿ ಎಂದು ಸುಳ್ಳು ಹೇಳಿಲ್ಲ ಎಂದು ಮೂರು ಬಾರಿ ಬೇಳಿದರು.
ಆಗ ಅಶೋಕ್, ನೀವು ಚಳವಳಿ, ಮುಷ್ಕರಕ್ಕೆ ಬೆಂಬಲ ನೀಡುತ್ತೀನೆ ಎಂದು ಹೇಳಿದ್ದೀರಾ ನಾನು ಬೇಕಾದರ ಅದನ್ನೆಲ್ಲಾ ಕಳುಹಿಸಿಕೊಡುತ್ತೇನೆ. ಆ ಬಗ್ಗೆ ಮಾಧ್ಯಮದ ಹೇಳಿಕೆ ಕಳುಹಿಸುತ್ತೇನೆ ಎಂದರು, ಆಗ ಮುಖ್ಯಮಂತ್ರಿಗಳು ಅಶೋಕ್ ಅವರಿಗೆ ಆಗ ನೀವು ಅಲ್ಲಿದ್ದೀರಾ ಎಂದು ಪ್ರಶ್ನಿಸಿದರು.
ಆಗ ಅಶೋಕ್, ನಾನು ಅಲ್ಲಿ ಇರಬೇಕಾ ಎಂದು ತಿರುಗೇಟು ನೀಡಿ, ಮಾಧ್ಯಮಗಳ ವರದಿಗಳನ್ನು ನಾನು ನೋಡಿದ್ದೇನೆ. ನೀವು ಹೇಳಿದ್ದೀರಾ ಏಂದು ಹೇಳಿದಾಗ ಮುಖ್ಯಮಂತ್ರಿಗಳು ನಾನು ಹೇಳಿಲ್ಲ ಎಂದು ಸಮಜಾಯಿಷಿ ನೀಡಿದರು





























