
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. ೧೬: ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಸಂವಿಧಾನದತ್ತವಾಗಿ ನೀಡಿರುವ ತಳವಾರ ಪರಿಶಿಷ್ಟ ಪಂಗಡದಡಿಯಲ್ಲಿ ಜಾತಿ ಪ್ರಮಾಣಪತ್ರ ಪಡೆದವರು ನಕಲಿ ಎಂದು ಹೇಳುವ ಮೂಲಕ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅಗೌರವ ತೋರಿದ್ದು, ಅದನ್ನು ವಿಜಯಪುರ ತಳವಾರ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದು ತಳವಾರ ಮಹಾಸಭಾದ ವಿಜಯಪುರ ಜಿಲ್ಲಾಧ್ಯಕ್ಷ ಪ್ರಕಾಶ ಸೊನ್ನದ ಹೇಳಿದರು.
ಭಾನುವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಕುಲಶಾಸ್ತ್ರ ಅಧ್ಯಯನದ ಮೂಲಕ ಭಾರತ ಸರ್ಕಾರ ತಳವಾರ ಜಾತಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಜಾರಿಯಾಗಿದ್ದು, ಅದನ್ನು ಈ ನಾಯಕರು ಮರೆತಿರುವರು. ಉಗ್ರಪ್ಪನವರು ತಕ್ಷಣ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದರು.
ಇದೇ ರೀತಿ ಹೇಳಿಕೆ ಮುಂದುವರೆಸಿದರೆ ತಳವಾರ ಸಮಾಜದ ಸಹನೆ ಕೆಣಕುವಂತ ಮುಖ್ಯಮಂತ್ರಿಗಳು ಸೇರಿ ಸರ್ಕಾರದಲ್ಲಿನ ಸಚಿವರು ಇಂತವರ ಹೇಳಿಕೆಗಳಿಗೆ ಲಗಾಮು ಹಾಕಬೇಕು. ಇಲ್ಲದಿದ್ದರೆ ಸಮಾಜವು ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್.ಟಿ ಪಟ್ಟಿಯಲ್ಲಿರುವ ಇತರೆ ೫೧ ಜಾತಿಗಳ ಸೌಲಭ್ಯಗಳನ್ನು ಕಬಳಿಸುತ್ತಾ ತಮ್ಮದೇ ಸ್ವತ್ತೆಂದು ಹೇಳಿಕೆ ನೀಡುವ ವಾಲ್ಮೀಕಿ ಹಾಗೂ ಬೇಡರ ಸಮಾಜದ ಕೆಲವು ಮುಖಂಡರು ಬೇರೆ ಸಮುದಾಯದವರಿಗೆ ಎಸ್ ಟಿ ಪ್ರಮಾಣಪತ್ರ ನೀಡುತ್ತಿರುವದು ಅಸೊಯೆ ಆಗುತ್ತಿದೆ. ತಳವಾರರನ್ನು ಬೇರೆ ಬೇರೆ ಸೃಷ್ಟಿ ಮಾಡಿ ಸರ್ಕಾರದ ಮೇಲೆ ಒತ್ತಡ ತಂದು ಬ್ಲ್ಯಾಕ್ ಮೇಲ್ ಮಾಡುತ್ತಿರುವದು ಸರಿಯೇ ಎಂದು ಛಾಟಿ ಬೀಸಿದರು. ಕೂಡಲೆ ಉಗ್ರಪ್ಪನವರು ಬೇಡ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.




























