ನೀರಿನ ಹೆಸರಲ್ಲೇ ಬೇಧಭಾವ : ಗಾಜರಕೋಟ್ ಗ್ರಾಮಸ್ಥರ ಪ್ರತಿಭಟನೆ

ಯಾದಗಿರಿ:ಜ.30:”ದಲಿತರೇ ಅನ್ನೋ ಕಾರಣಕ್ಕೆ ಕುಡಿಯುವ ನೀರನ್ನೇ ಕಡಿತ ಮಾಡಿದ್ದಾರಾ?” ಎಂಬ ಪ್ರಶ್ನೆಯೊಂದಿಗೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ದಲಿತ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ.3 ಹಾಗೂ ವಾರ್ಡ್ ನಂ.4ರ ದಲಿತ ಕುಟುಂಬಗಳಿಗೆ ಉದ್ದೇಶಪೂರ್ವಕವಾಗಿ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮನೆಮನೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಪೈಪ್‍ಲೈನ್‍ಗಳನ್ನು ಜಾಣ್ಮೆಯಿಂದ ಹೊಡೆದು ನಾಶಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್‍ಸಿ ವಾರ್ಡಿನಲ್ಲಿ ಕೊಳಚೆ ನಡುವೆ ಬದುಕು

ಎಸ್‍ಸಿ ವಾರ್ಡಿನ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಮಧ್ಯೆ ಕೊಳಚೆ ನೀರು ನಿಂತಿದೆ. ಕಸದ ರಾಶಿ, ಮುರಿದ ರಸ್ತೆಗಳ ನಡುವೆ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಜೀವಭೀತಿಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ವಚ್ಛತೆ ಎಂಬ ಪದವೇ ಇಲ್ಲಿ ಕಾಣೆಯಾಗಿದೆ ಎಂಬುದು ಗ್ರಾಮಸ್ಥರ ಆಕ್ರೋಶ.

ಅಧಿಕಾರಿಗಳ ಭೇಟಿ – ಪರಿಹಾರ ಶೂನ್ಯ

ಈ ಗಂಭೀರ ಪರಿಸ್ಥಿತಿಯ ನಡುವೆಯೇ ಇತ್ತೀಚೆಗೆ ಗ್ರಾಮಕ್ಕೆ ತಾಲೂಕು ಅಧಿಕಾರಿ ಅಂಬರೀಶ್ ಪಾಟೀಲ್ ಹಾಗೂ ಪಿಡಿಓ ಶರಣಪ್ಪ ಮೈಲಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಇದುವರೆಗೂ ಯಾವುದೇ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀರು ಕೇಳಿದರೆ ಅವಮಾನ, ಗದರಿಕೆ
ಕುಡಿಯುವ ನೀರಿಗಾಗಿ ಪಕ್ಕದ ಬೀದಿಗೆ ಹೋದ ದಲಿತ ಮಹಿಳೆಯರಿಗೆ ನೀರು ನೀಡದೇ ಅವಮಾನಿಸಲಾಗಿದೆ, ಗದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
“ನಾವು ದಲಿತರಾಗಿದ್ದೇವೆ ಅನ್ನೋ ಕಾರಣಕ್ಕೆ ಈ ರೀತಿ ವರ್ತನೆ ಮಾಡುತ್ತಿದ್ದಾರೆ” ಎಂದು ಮಹಿಳೆಯರು ಕಣ್ಣೀರಿನಿಂದ ನೋವು ಹೊರಹಾಕಿದ್ದಾರೆ. ಇದರಿಂದ ಗ್ರಾಮದಲ್ಲಿ ಸಾಮಾಜಿಕ ಬೇಧಭಾವ ಇನ್ನೂ ಜೀವಂತವಾಗಿದೆ ಎಂಬುದು ಸ್ಪಷ್ಟವಾಗಿದೆ.

ನೀರಿನ ಕೊರತೆಯಿಂದಾಗಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವರು ದೂರದೂರಿನಿಂದ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ದೈನಂದಿನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ
“ನೀರಿಲ್ಲದೆ ಬದುಕೋದು ತೀವ್ರ ಸಂಕಷ್ಟವಾಗಿದೆ” ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಮಹಿಳೆಯರ ಪ್ರಮುಖ ಬೇಡಿಕೆಗಳು

ತಕ್ಷಣ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು
ಹಾಳಾಗಿರುವ ಪೈಪ್‍ಲೈನ್‍ಗಳ ದುರಸ್ತಿ ಮಾಡಬೇಕು
ಬೇಧಭಾವಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು
ಅನುದಾನ ಕೇವಲ ಕಾಗದಕ್ಕೆ?

ಇನ್ನೊಂದೆಡೆ, ಗ್ರಾಮ ಪಂಚಾಯಿತಿಯಲ್ಲಿ ಎಸ್‍ಸಿ-ಎಸ್‍ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಾದ ಶೇ.25% ಅನುದಾನ, ವಿದ್ಯಾರ್ಥಿವೇತನ ಸೇರಿದಂತೆ ಯೋಜನೆಗಳು ಕೇವಲ ಕಾಗದದಲ್ಲೇ ಉಳಿದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ದಲಿತರ ಮಕ್ಕಳಿಗೆ ವಿದ್ಯಾರ್ಥಿವೇತನ ಕೇಳಿದರೆ ವರ್ಷಗಟ್ಟಲೆ ಕಚೇರಿಗೆ ಸುತ್ತಾಡಿಸುವುದೇ ಇವರ ಕೆಲಸ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಅವರ ಮಗ ಕೃಷ್ಣ (ತಂದೆ ಶ್ರೀನಿವಾಸ್) ಅವರು ಸಾರ್ವಜನಿಕರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಎಸ್‍ಸಿ ವಾರ್ಡ್‍ನಲ್ಲಿ ಸ್ವಚ್ಛತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಧ್ಯಕ್ಷರು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೂಡಲೇ ಸಮಸ್ಯೆ ಪರಿಹಾರವಾಗದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಹಿಳೆಯರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದು, ಜಿಲ್ಲಾಡಳಿತ ಹಾಗೂ ಪಂಚಾಯಿತಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದ್ದಾರೆ.