Home ಜಿಲ್ಲೆ ಕಲಬುರಗಿ ನಿರಾಶಾದಾಯಕ ಬಜೆಟ್ ಬಜೆಟ್: ಜಗದೇವ ಗುತ್ತೇದಾರ

ನಿರಾಶಾದಾಯಕ ಬಜೆಟ್ ಬಜೆಟ್: ಜಗದೇವ ಗುತ್ತೇದಾರ

ಕಲಬುರಗಿ,ಫೆ.2-ಕರ್ನಾಟಕದವರೇ ಆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಹು ನಿರೀಕ್ಷೆಯಲ್ಲಿದ್ದ ಕರ್ನಾಟಕದ ಜನರಿಗೆ ಭಾರಿ ನಿರಾಸೆ ತಂದಿದೆ. ಅವರು ಮಂಡಿಸಿದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತಾಳಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಟೀಕಿಸಿದ್ದಾರೆ.
ಇದೊಂದು ಅರ್ಥಹೀನ ಹಾಗೂ ನಿರಾಸೆದಾಯಕ ಬಜೆಟ್ ಆಗಿದ್ದು ಆದಾಯ ತೇರಿಗೆಯಲ್ಲಿ ಯಾವುದೇ ಬದಲಾವಣೆ ತಂದಿರುವದಿಲ್ಲ. ಮೇಲಾಗಿ ಅತೀ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಕಿಂಚಿತ್ತು ಗಮನಹರಿಸದೇ ಇರುವದು ಈ ಭಾಗದ ಜನರಿಗೆ ಮೈಮೇಲೆ ಬರೆ ಎಳೆದಂತಾಗಿದೆ. 371 (ಜೆ) ಅಡಿಯಲ್ಲಿ ರಾಜ್ಯ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ವಿಶೇಷವಾದ ಅನುದಾನ ನೀಡುತ್ತಿದೆ. ಕೇಂದ್ರ ಸರಕಾರವು ಕೂಡ ವಿಶೇಷ ಅನುದಾನ ನಿಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಆದರೆ ಯಾವುದೇ ಅನುದಾನ ನೀಡದೇ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ದ್ರೋಹ ಮಾಡಿದೆ. ಹಿಂದಿನ ಯುಪಿಎ ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿಯಲ್ಲಿ ರೈಲ್ವೆ ವಿಭಾಗ ಘೋಷಿಸಲಾಗಿತ್ತು. ಸದರಿ ರೈಲ್ವೆ ವಿಭಾಗ ಆರಂಭಿಸುವ ಬಗ್ಗೆ ಈ ಬಜೆಟ್‍ನಲ್ಲಿ ಚಕಾರ ಎತ್ತದೆ ಇರುವದು, ಯುಪಿಎ ಸರಕಾರದಲ್ಲಿ ಕಲಬುರಗಿಯಲ್ಲಿ ಆರಂಭಿಸಲಾದ ಇಎಸ್‍ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಚಕಾರ ಎತ್ತದೇ ಇರುವದು ಈ ಭಾಗದ ಜನರಿಗೆ ದ್ರೋಹ ಮಾಡಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿ ಕುಸಿತ ಕಂಡಿದ್ದು, ಹೂಡಿಕೆದಾರರಿಗೆ 30 ನಿಮಿಷದಲ್ಲಿ ಸುಮಾರು 13 ಲಕ್ಷ ಕೋಟಿ ನಷ್ಟ ಕಂಡು ಷೇರು ಮಾರುಕಟ್ಟೆ ಮಹಾಪತನದ ಹಾದಿಯಲ್ಲಿ ಸಾಗುತ್ತಿದೆ. ಭಾರತ ದೇಶದ ಬೆನ್ನೇಲುಬಾದ ರೈತರಿಗೆ ಈ ಬಜೆಟ್‍ನಲ್ಲಿ ಯಾವುದೇ ರೀತಿಯ ಹೆಳಿಕೊಳ್ಳುವಂತಹ ರೈತರ ಪರವಾದ ಹೊಸ ಯೋಜನೆಗಳು ಘೋಷಿಸದೇ ರೈತರಿಗೆ ಹೆಳತೀರದಷ್ಟು ಅನ್ಯಾಯವಾಗಿದೆ. ಇಂದಿನ ಬಜೆಟ್‍ನಲ್ಲಿ ಚುನಾವಣಾ ದೃಷ್ಟಿಯಿಂದ ತಮಿಳುನಾಡಿಗೆ ಹಾಗೂ ಪಶ್ಚಿಮ ಬಂಗಾಳ, ಆಸ್ಸಾಂ, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕರ್ನಾಟಕದ ಪಾಲಿಗೆ ಹಾಗೂ ರೈತರು, ಹಿಂದುಳಿದವರು, ಕಡುಬಡವರು, ಕೂಲಿಕಾರ್ಮಿಕರ ಪಾಲಿಗೆ ಇದು ಶೂನ್ಯ ಬಜೆಟ್ ಆಗಿದೆ. ಒಟ್ಟಾರೆ ಈ ಬಜೆಟ್ ಜನವಿರೋಧಿ, ಅಭಿವೃದ್ಧಿಗೆ ಮಾರಕವಾದ ಶೂನ್ಯ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.