
ಯಾದಗಿರಿ:ಮಾ.೯: ಕುಟುಂಬದ ಆಸ್ತಿ ಹಕ್ಕಿಗಾಗಿ ಹೋರಾಡಿದ ಅಂಗವಿಕಲ ಹಾಗೂ ನೊಂದ ಮಹಿಳೆ ಮೇಲೆ ಪತಿ ಮತ್ತು ಎರಡನೇ ಹೆಂಡತಿಯ ಮಕ್ಕಳಿಂದ ಅಮಾನುಷವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ. ಪೀಡಿತ ಮಹಿಳೆ ಭೀಮ್ ಬಾಯಿ ಅವರು ವರದಿಗಾರರ ಮುಂದೆ ಕಣ್ಣೀರಿಟ್ಟು ತಮ್ಮ ಹೃದಯವಿದ್ರಾವಕ ನೋವನ್ನು ಹೊರಹಾಕಿದ್ದು, ತಾಯಿ-ಮಗಳು ಇಂದು ನ್ಯಾಯಕ್ಕಾಗಿ ಅಲೆದಾಡುವ ದುಸ್ಥಿತಿಗೆ ತಲುಪಿರುವುದು ಸಮಾಜದ ಮನಸ್ಸು ಕಲುಕುವಂತಾಗಿದೆ.
ಭೀಮ್ ಬಾಯಿ ಅವರು ಹನುಮಂತ್ ಬಿಳ್ಹಾರ್ ಅವರ ಮೊದಲನೇ ಹೆಂಡತಿಯಾಗಿದ್ದು, ಹಲವು ವರ್ಷಗಳಿಂದ ಕುಟುಂಬದೊAದಿಗೆ ಜೀವನ ಸಾಗಿಸುತ್ತಿದ್ದರು. ಆದರೆ ನಂತರ ಹನುಮಂತ್ ಅವರು ಎರಡನೇ ಮದುವೆ ಮಾಡಿಕೊಂಡ ನಂತರದಿAದ ಎರಡನೇ ಹೆಂಡತಿ ಹಾಗೂ ಅವರ ಮಕ್ಕಳಿಂದ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಅಂಗವಿಕಲೆ ಆಗಿರುವ ಭೀಮ್ ಬಾಯಿ, ಇಂತಹ ದೌರ್ಜನ್ಯವನ್ನು ಸಹಿಸಿಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸುತ್ತಿದ್ದು, ಇತ್ತೀಚೆಗೆ ಕುಟುಂಬದ ಆಸ್ತಿಯಲ್ಲಿ ನ್ಯಾಯಯುತ ಪಾಲು ಕೇಳಿದ ಕಾರಣದಿಂದ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ ಎಂದು ತಿಳಿದುಬಂದಿದೆ.
ಈ ಕುರಿತು ವಡಗೇರಾ ಪೊಲೀಸ್ ಠಾಣೆಗೆ ಹಲವು ಬಾರಿ ದೂರು ನೀಡಿದರೂ ಸಹ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿ ತಾಯಿ-ಮಗಳು ನರಕಯಾತನೆ ಅನುಭವಿಸುತ್ತ ಬದುಕುತ್ತಿರುವಂತಾಗಿದೆ.
ಸುಮ್ಮನೆ ಯಾವುದೋ ವಿಷಯವನ್ನು ನೆಪ ಮಾಡಿಕೊಂಡು ನನ್ನನ್ನೂ ನನ್ನ ಮಗಳನ್ನು ಕೂಡ ನಿರಂತರವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಮನೆಗೆ ಬಂದು ನಿಂದನೆ ಮಾಡುವುದು, ಹಲ್ಲೆ ನಡೆಸುವುದು ಹಾಗೂ ದಿನನಿತ್ಯ ಮಾನಸಿಕ ಕಿರುಕುಳ ನೀಡುವುದು ನಡೆಯುತ್ತಿದೆ. ಇದರಿಂದ ಬೇಸತ್ತು ನ್ಯಾಯಕ್ಕಾಗಿ ಪೊಲೀಸರ ಬಳಿ ಹೋದರೂ ಅಲ್ಲಿಯೂ ನ್ಯಾಯ ಸಿಗುತ್ತಿಲ್ಲ ಎಂದು ನೊಂದ ಮಹಿಳೆ ಭೀಮ್ ಬಾಯಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಭೀಮ್ ಬಾಯಿ ಅವರು ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದು, ಯಾವುದೇ ರೀತಿಯ ಕುಟುಂಬ ಬೆಂಬಲವಿಲ್ಲದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗಂಡ ಹಾಗೂ ಅವರ ಎರಡನೇ ಹೆಂಡತಿ ಮತ್ತು ಮಕ್ಕಳಿಂದ ಆಗುತ್ತಿರುವ ಕಿರುಕುಳವನ್ನು ಸಹಿಸಲಾರದೆ ತಾಯಿ-ಮಗಳು ಪೊಲೀಸರ ಮೆಟ್ಟಿಲೇರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಈ ವಿಚಾರದಿಂದ ಆಕ್ರೋಶಗೊಂಡ ಪತಿ ಹನುಮಂತ್ ಹಾಗೂ ಎರಡನೇ ಹೆಂಡತಿ ಮತ್ತು ಅವರ ಮಕ್ಕಳು, “ಕೋರ್ಟ್ನಲ್ಲಿ ಹಾಕಿರುವ ಕೇಸ್ ಹಿಂತೆಗೆದುಕೊಳ್ಳಬೇಕು, ಇಲ್ಲವಾದರೆ ನಿನ್ನನ್ನೂ ನಿನ್ನ ಮಗಳನ್ನು ಕೂಡ ಕೊಂದು ಹಾಕುತ್ತೇವೆ” ಎಂದು ಪದೇಪದೇ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಶನಿವಾರ ಸಂಜೆ ಹಾಗೂ ರಾತ್ರಿ ವೇಳೆ, ಯಾರೂ ಇಲ್ಲದ ಸಮಯವನ್ನು ಗಮನಿಸಿ ಹನುಮಂತ್ ಹಾಗೂ ಅವರ ಕುಟುಂಬದವರು ಸೇರಿಕೊಂಡು ಅಂಗವಿಕಲ ಮಹಿಳೆ ಭೀಮ್ ಬಾಯಿ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಭೀಮ್ ಬಾಯಿ ಹಾಗೂ ಅವರ ಮಗಳು ಭಯಭೀತರಾಗಿದ್ದು, ತಮ್ಮ ಜೀವಕ್ಕೂ ಅಪಾಯ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ತಿ ವಿಚಾರದಲ್ಲಿ ನ್ಯಾಯ ಕೇಳಿದ ತಪ್ಪಿಗೆ ಅಂಗವಿಕಲ ಹಾಗೂ ನೊಂದ ಮಹಿಳೆ ಮೇಲೆ ಇಂತಹ ಅಮಾನವೀಯ ಹಲ್ಲೆ ನಡೆದಿರುವುದು ಮಾನವೀಯ ಮೌಲ್ಯಗಳಿಗೆ ಧಕ್ಕೆ ತರುವ ಘಟನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿ-ಮಗಳಿಗೆ ಇಂದು ಆಸರೆ ಇಲ್ಲದಂತಾಗಿದ್ದು, ನ್ಯಾಯಕ್ಕಾಗಿ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಸಂಬAಧಪಟ್ಟ ಪೊಲೀಸ್ ಇಲಾಖೆ ಹಾಗೂ ಆಡಳಿತಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ಅಂಗವಿಕಲ ಮಹಿಳೆ ಭೀಮ್ ಬಾಯಿ ಹಾಗೂ ಅವರ ಮಗಳಿಗೆ ಸೂಕ್ತ ರಕ್ಷಣೆ ಒದಗಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.































