
ಮಾ. ೧೬ ಸಚಿವರಿಗೆ ಸಿಎಂ ಔತಣಕೂಟ
ಬೆಂಗಳೂರು, ಮಾ. ೧೩- ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಕಾಂಗ್ರೆಸ್‌ನಲ್ಲಿ ಡಿನ್ನರ್ ಪೊಲಿಟಿಕ್ಸ್‌ಗಳು ಬಿರುಸಾಗಿದ್ದು, ಆಂತರಿಕ ಸಂಘರ್ಷಗಳು ಹೆಚ್ಚಿವೆ. ಬಣ ರಾಜಕೀಯವೂ ಮೇಳೈಸಿದೆ.
ಬಜೆಟ್ ಅಧಿವೇಶನ ಸಂದರ್ಭದಲ್ಲೇ ನಿನ್ನೆ ರಾತ್ರಿ ಕಾಂಗ್ರೆಸ್‌ನ ೨೫ ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಿ ಸಂಪುಟ ಪುನಾರಚಿಸಿ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿರುವ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳ ೧೬ ರಂದು ತಮ್ಮ ಆಪ್ತ ಸಚಿವರ ಔತಣಕೂಟವನ್ನು ಆಯೋಜಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ನಡೆದಿರುವ ಈ ಡಿನ್ನರ್ ಪೊಲಿಟಿಕ್ಸ್ ಮುಂದೆ ರಾಜಕೀಯವಾಗಿ ಹಲವು ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ಸಂಕೇತಿಸುತ್ತಿವೆ.
ಒಳ ಮೀಸಲಾತಿ ಗೊಂದಲವನ್ನು ನಿವಾರಿಸಿ ಅದಕ್ಕೊಂಡು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳ ೧೬ ರಂದು ಸೋಮವಾರ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ತಮ್ಮ ಆಪ್ತ ಸಚಿವರಿಗೆ ರಾತ್ರಿ ಔತಣಕೂಟ ಆಯೋಜಿಸಿದ್ದಾರೆ.
ಆತಂರಿಕ ಮೀಸಲಾತಿ ಪರಿಹಾರ ನೆಪದಲ್ಲಿ ಆಯೋಜಿಸಿರುವ ಈ ಔತಣಕೂಟದಲ್ಲಿ ಅಧಿಕಾರ ಹಂಚಿಕೆಯ ವಿಚಾರವೂ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ಬಜೆಟ್ ಅಧಿವೇಶನದ ನಂತರ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇರುವುದರಿ ಕಾಂಗ್ರೆಸ್‌ನಲ್ಲಿ ಡಿನಿನರ್ ಮೀಟಿಂಗ್‌ಗಳು ಬಿರುಸಾಗಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರುಗಳು ಡಿನ್ನರ್ ಪೊಲಿಟಿಕ್ಸ್‌ನಲ್ಲಿ ಬ್ಯುಸಿಯಾಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬಲ ಹೆಚ್ಚಿಸಿಕೊಳ್ಳಲು ಔತಣಕೂಟಗಳನ್ನು ಆಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಮಂಗಳವಾರ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಸಂದರ್ಭದಲ್ಲಿ ಶಾಸಕರಿಗೆ ಔತಣಕೂಟ ಆಯೋಜಿಸಿದ್ದರು. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪಾಲ್ಗೊಂಡಿದ್ದರು. ನಿನ್ನೆ ೨೫ ಕ್ಕೂ ಹೆಚ್ಚು ಹಿರಿಯ ಶಾಸಕರುಗಳು ಸಭೆ ನಡೆಸಿ ಸಂಪುಟ ಪುನಾರಚನೆಗೆ ಹಕ್ಕೋತ್ತಾಯ ಮಂಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ೧೬ ರಂದು ಸೋಮವಾರ ತಮ್ಮ ಆಪ್ತ ಸಚಿವರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ.
ಒಳ ಮೀಸಲಾತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಔತಣಕೂಟದಲ್ಲಿ ಚರ್ಚೆಯಾಗಲಿದ್ದು, ಅಧಿಕಾರ ಹಂಚಿಕೆಯ ವಿಚಾರವೂ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ರಾಮಲಿಂಗಾರೆಡ್ಡಿ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔತಣಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಸೋಮವಾರ ಸಂಜೆ ೭.೩೦ ಕ್ಕೆ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಸರ್ಕಾರದ ಬಗ್ಗೆ ಪಕ್ಷದ ಬಗ್ಗೆ ಹಾಗಾಗ ಕರೆದು ಮಾತನಾಡುತ್ತಾರೆ. ಇದರಲ್ಲಿ ವಿಶೇಷ ಏನಿಲ್ಲ ಎಂದು ಹೇಳಿದರು.
ಸೋಮವಾರದ ಸಭೆಗೆ ೧೬ ಸಚಿವರನ್ನು ಮಾತ್ರ ಕರೆದಿದ್ದಾರೆ. ಇನ್ನು ಬೇರೆ ಯಾರನ್ನು ಕರೆಯುತ್ತಾರೋ ನನಗೆ ಗೊತ್ತಿಲ್ಲ. ಸಾಮಾನ್ಯವಾಗಿ ಆಗಾಗ್ಗೆ ಮುಖ್ಯಮಂತ್ರಿಗಳು ಈ ರೀತಿ ಕರೆದು ಮಾತನಾಡುತ್ತಾರೆ. ಪಕ್ಷ, ಸರ್ಕಾರದ ವಿಚಾರ ವಿನಿಮಯಗಳು ಆಗುತ್ತವೆ ಎಂದರು.
ಮುಖ್ಯಮಂತ್ರಿಗಳು ಬಜೆಟ್ ಅಧಿವೇಶನದ ವಿಚಾರ, ಒಳಮೀಸಲಾತಿ ವಿಚಾರವಾಗಿ ಮಾತನಾಡಲು ಕರೆದಿರಬಹುದು. ಸಿಎಲ್‌ಪಿ ಸಭೆಯಲ್ಲಿ ಪ್ರಸ್ತಾಪಿರ ವಿಚಾರವಾಗಿದ್ದರೆ ಎಲ್ಲ ಸಚಿವರನ್ನು ಕರೆಯುತ್ತಿದ್ದರು. ಈಗ ಕೆಲವೇ ಸಚಿವರನ್ನು ಕರೆದಿದ್ದಾರೆ. ಒಳ ಮೀಸಲಾತಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆಗೆ ಇರಬಹುದು ಎಂದು ಹೇಳಿದರು.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬಜೆಟ್ ಬಗ್ಗೆ ಅಸಮಾಧಾನ ಹೊರ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಮುಖ್ಯಮಂತ್ರಿಗಳು ಹಣದ ಲಭ್ಯತೆ ನೋಡಿಕೊಂಡು ತೀರ್ಮಾನ ಮಾಡುತ್ತಾರೆ. ನಾವು ಕೇಳಿದ್ದನ್ನೆಲ್ಲಾ ಕೊಡುವುದಕ್ಕೆ ಆಗಲ್ಲ. ಮಾಧ್ಯಮದ ಮುಂದೆ ಈ ರೀತಿ ಮಾತನಾಡುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಸಭೆ ತಪ್ಪಲ್ಲ
ಕಾಂಗ್ರೆಸ್‌ನ ಕೆಲ ಹಿರಿಯ ಶಾಸಕರು ನಿನ್ನೆ ಸಭೆ ಸೇರಿರುವುದರಲ್ಲಿ ತಪ್ಪೇನು ಇಲ್ಲ. ಅವರಿಗೂ ಆಸೆ ಇದ್ದೆ ಇರುತ್ತಲ್ಲಾ ಎರಡೂವರೆ ವರ್ಷ ಆದ ಮೇಲೆ ಸಚಿವ ಸ್ಥಾನ ಸಿಗಬಹುದು ಎಂದುಕೊಂಡಿದ್ದರು. ೩-೪ ತಿಂಗಳ ವಿಳಂಬವಾಗಿದೆ ಹಾಗಾಗಿ ಹಿರಿಯ ಶಾಸಕರ ಸಭೆ ಸೇರಿದ್ದಾರೆ ಎಂದರು
ನಿನ್ನೆಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ೩-೪ ಬಾರಿ ಗೆದ್ದವರು ಇದ್ದಾರೆ ಎಂದು ಹೇಳಿದರು.






























