Home ಜಿಲ್ಲೆ ತುಮಕೂರು ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಹುಳಿಯಾರು, ಮಾ. ೧೪- ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಯವರ ಆಶಯದಂತೆ ಜಾರಿಯಲ್ಲಿರುವ ’ವಾತ್ಸಲ್ಯ ಕಾರ್ಯಕ್ರಮದಡಿ, ಹಂದನಕೆರೆ ವಲಯದ ದುರ್ಗಮ್ಮ ಎಂಬುವರಿಗೆ ನಿರ್ಮಿಸಿಕೊಟ್ಟ ನೂತನ ಮನೆಯನ್ನು ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು ಹಸ್ತಾಂತರಿಸಿದರು.


ಕಳೆದ ೨೦ ವರ್ಷಗಳಿಂದ ಹಂದನಕೆರೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಸಣ್ಣ ಹಳೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ದುರ್ಗಮ್ಮ ಅವರು ಯೋಜನೆಯಡಿ ಮಾಶಾಸನ ಪಡೆಯುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ಕಾರ್ಯಕರ್ತರು ಮಾಶಾಸನ ನೀಡಲು ಮನೆಗೆ ತೆರಳಿದ್ದಾಗ ತೆಗೆದ ಭಾವಚಿತ್ರವನ್ನು ಗಮನಿಸಿದ ಮಾತೃಶ್ರೀ ಹೇಮಾವತಿ ಅಮ್ಮನವರು, ಮನೆಯ ದುಸ್ಥಿತಿಯನ್ನು ಕಂಡು ಅವರಿಗೆ ಸುಂದರವಾದ ’ವಾತ್ಸಲ್ಯ ಮನೆ’ ನಿರ್ಮಿಸಿಕೊಡುವಂತೆ ಸೂಚಿಸಿದ್ದರು. ಅದರಂತೆ ಸುಸಜ್ಜಿತ ಮನೆ ನಿರ್ಮಾಣಗೊಂಡು ಅವರ ಕನಸು ನನಸಾಗಿದೆ.


ಮನೆ ಹಸ್ತಾಂತರಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ರಾಜ್ಯಾದ್ಯಂತ ಈಗಾಗಲೇ ಸುಮಾರು ೭೨೫ ವಾತ್ಸಲ್ಯ ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು ಯೋಜನೆಯ ಮೂಲ ಉದ್ದೇಶವಾಗಿದೆ. ದುರ್ಗಮ್ಮರ ಬದುಕಿಗೆ ಈ ಮನೆ ಬೆಳಕು ನೀಡಲಿದೆ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಪಿಡಿಓ ಬಸವಲಿಂಗಯ್ಯ, ಅಧ್ಯಕ್ಷ ರಾಜಣ್ಣ, ಎಸ್‌ಹೆಚ್‌ಜಿ ವಿಭಾಗದ ಯೋಜನಾಧಿಕಾರಿ ಸಂಧ್ಯಾ, ಎಎಸ್‌ಐ ನಾಗಭೂಷಣ್, ಕಾಳಿದಾಸ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ದಾನಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ದಾಸಪ್ಪ, ಗ್ರಾ.ಪಂ ಸದಸ್ಯ ದಯಾನಂದ್, ತಾಲ್ಲೂಕು ಯೋಜನಾಧಿಕಾರಿ ರಾಮಚಂದ್ರ ಡಿ. ಮತ್ತಿತರರು ಭಾಗವಹಿಸಿದ್ದರು.