
ಸಂಜೆವಾಣಿ ವಾರ್ತೆ,
ವಿಜಯಪುರ, ಡಿ.೮: ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ರವಿವಾರ ನಗರದ ಮರಾಠಿ ವಿದ್ಯಾಲಯ ಹಾಗೂ ಅಂಜುಮನ್ ಬಾಲಕಿಯರ ಪದವಿ-ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಟಿಇಟಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷಾ ವ್ಯವಸ್ಥೆ,ಪರೀಕ್ಷೆ ಕೇಂದ್ರಗಳಲ್ಲಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿ, ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಿರುವ ಕುರಿತು ಸಮಗ್ರ ಪರಿಶೀಲನೆ ನಡೆಸಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡು, ಅಚ್ಚುಕಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು. ಕಡ್ಡಾಯವಾಗಿ ಕೊಠಡಿಗಳಲ್ಲಿ ವಿದ್ಯುತ್ ದೀಪದ ವ್ಯವಸ್ಥೆ, ಪ್ರಶಾಂತ ವಾತಾವರಣದಲ್ಲಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವ್ಯವಸ್ಥೆಗೆ ಅಗತ್ಯ ಕ್ರಮಕ್ಕೆ ಅವರು ಸೂಚನೆ ನೀಡಿದರು.
ಪರೀಕ್ಷಾ ನಿಯಮಗಳನ್ವಯ ಅತ್ಯಂತ ಸುಸೂತ್ರವಾಗಿ ನಿರ್ವಹಿಸಬೇಕು ಎಂದು ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಸೇರಿದಂತೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
























