ನಗರದ ಅಭಿವೃದ್ಧಿಗೆ ಕೆಕೆಆರ್‍ಡಿಬಿ ಅನುದಾನ ಪಡೆಯಲು ಆಗ್ರಹ

ಕಲಬುರಗಿ,ನ.20: ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ನಗರದ ಅಭಿವೃದ್ಧಿ ಸಲುವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಪಡೆದು ಅಭಿವೃದ್ಧಿ ಮಾಡಲಿ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನಗರದ ವಿವಿಧ ವೃತ್ತಗಳು, ವಿವಿಧ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗೆ ಒಟ್ಟು 8 ಕೋಟಿ ರೂಪಾಯಿ ಮೊತ್ತದ ಅನುದಾನ ಖರ್ಚು ಮಾಡುತ್ತಿರುವುದು ಖಂಡನೀಯ.ಅಭಿವೃದ್ಧಿಗೆ ವಿರೋಧ ಮಾಡುತ್ತಿಲ್ಲ. ಆದರೆ ನಗರದ ಅಭಿವೃದ್ಧಿ ಸಲುವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಅನುದಾನ ಪಡೆದು ಅಭಿವೃದ್ಧಿ ಮಾಡಲಿ. ಯಾಕೆಂದರೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ಜೇವರ್ಗಿ ರಸ್ತೆಯಲ್ಲಿರುವ ಅಟಲ ಬಿಹಾರಿ ವಾಜಪೇಯಿ ಬಡಾವಣೆಯ ಭೂ ಖರೀದಿ ಮಾಲೀಕರಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಒಟ್ಟು 300 ನೂರು ಕೋಟಿ ರೂಪಾಯಿ ಪಾವತಿಸುತ್ತೇವೆಂದು ಮುಂದಿನ ಜನವರಿ ತಿಂಗಳು ಸಮಯ ಪಡೆಯಲಾಗಿದೆ. ಅದರ ಜೊತೆಗೆ ಪ್ರತಿ ತಿಂಗಳಿಗೆ ಅದಕ್ಕೆ ಸುಮಾರು 10 ಲಕ್ಷ ಪರಿಹಾರ ಸಹ ಪಾವತಿಸಬೇಕಾಗುತ್ತದೆ. ಇಂತಹ ದೊಡ್ಡ ಮೊತ್ತವನ್ನು ಬಾಕಿ ಇರುವ ನಿವೇಶನ ಮಾರಾಟ ಮತ್ತು ಹರಾಜು ಮಾಡಿದರೆ ಮಾತ್ರ ಪಾವತಿಸುವುದು ಸಾಧ್ಯ.ಈ ಮೊತ್ತ ಸಂಗ್ರಹಿಸಲು ಕುಡಾ ಆಯುಕ್ತ ಮತ್ತು ಅಧ್ಯಕ್ಷ ಅದಲ್ಲದೇ ಕಲಬುರಗಿ ಉಸ್ತುವಾರಿ ಸಚಿವರು ಯಾವುದೆ ಕಾಳಜಿವಹಿಸುತ್ತಿಲ್ಲ. ಅದಕ್ಕಾಗಿ ಕುಡಾ ಅನುದಾನ ಬಳಕೆ ಮಾಡದೆ ಕೆ ಕೆ ಆರ್ ಡಿ ಬಿ ಅನುದಾನದಿಂದ ಅಭಿವೃದ್ಧಿ ಕಾಮಗಾರಿ ನಡೆಸಲು ಆಗ್ರಹ. ಒಂದು ವೇಳೆ ಈ ಟೆಂಡರ ರದ್ದುಪಡಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.ಕುಡಾ ಒಂದು ವೇಳೆ ನಿಗದಿತ ಸಮಯದಲ್ಲಿ ಪಾವತಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಮೇತ ಕುಡಾ ಆಯುಕ್ತ, ಡಿಸಿ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.