
ಕಲಬುರಗಿ:ಮಾ.೫: ರಾಜ್ಯ ಸರ್ಕಾರದ ಬಜೆಟ್ ನಲ್ಲಿ ದಲಿತರಿಗೆ ಶೇಕಡ ೨೪.೧ರಷ್ಟು ಹಣವನ್ನು ಮೀಸಲಿಡಬೇಕೆಂದು ದಸಂಸ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ಒತ್ತಾಯಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸಂವಿಧಾನವು “ಸಾಮಾಜಿಕ ನ್ಯಾಯ” ತತ್ವವನ್ನು ಸಂಪೂರ್ಣವಾಗಿ ಮಾನ್ಯ ಮಾಡಿರುವುದು ತಮಗೆ ತಿಳಿದ ವಿಷಯವೇ ಆಗಿದೆ. ರಾಜ್ಯದಲ್ಲಿ ‘ಸಾಮಾಜಿಕ ನ್ಯಾಯ’ ಈಡೇರಿಸಿರುವ ಜನಪ್ರಿಯ ಮತ್ತು ಬದ್ಧತೆ ಇರುವ ಮುಖ್ಯಮಂತ್ರಿ ಎಂದು ತಾವು ಖ್ಯಾತರಾಗಿರುತ್ತೀರಿ.
ಈ ಉರಣದಿಂದಲೇ ನಮ್ಮ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ)ಯು ಸರ್ವಾನುಮತದಿಂದ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಿರುವ ನಮ್ಮ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ)ಯು ಪ್ರತಿಯೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಮತಗಳು ಚಿಲಾದಾಕೆ ಆಗುವಂತೆ ನೋಡಿಕೊಂಡಿತು. ರಾಜ್ಯದ ದಲಿತ ಸಂಘಟನೆಗಳ ಈ ಕೊಡುಗೆಯನ್ನು ತಾವು ಕೂಡ ಬೆಂಗಳೂರಿನ ಪುರಭವನದಲ್ಲಿ ನಡೆಸಲಾದ ಸಮಾವೇಶದಲ್ಲಿ ಸ್ಮರಿಸಿರುತ್ತೀರಿ. ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮತ್ತು ಸಮಸ್ತ ಶೋಷಿತ ಸಮುದಾಯಗಳ ಸರ್ವಾಂಗೀಣ ಪ್ರಗತಿ ಆಗಬೇಕಾದರೆ ತಾವು ಬಜೆಟ್‌ನಲ್ಲಿ ಶೇ.೨೪.೧ ರಷ್ಟು ಹಣವನ್ನು ಮೀಸಲಿಡಬೇಕು.
ಈ ಹಿನ್ನೆಲೆಯಲ್ಲಿ ಈ ಮನವಿಯಲ್ಲಿರುವ ಹಕ್ಕೊತ್ತಾಯಗಳನ್ನು ಆದ್ಯತೆಯ ಮೇಲೆ ೨೦೨೬-೨೦೨೭ರ ಬಜೆಟ್‌ನಲ್ಲಿ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ)ಯು ಒತ್ತಾಯಿಸುತ್ತದೆ.
ಹಕ್ಕೊತ್ತಾಯಗಳು ಒಳಮೀಸಲಾತಿಯಲ್ಲಿ ಸೃಷ್ಟಿಯಾಗಿರುವ ರೋಸ್ಟರ್ ಬಿಂದು ಗೊಂದಲವನ್ನು ಸರಿಪಡಿಸಿ ಎಲ್ಲಾ ೧೦೧ ಪರಿಶಿಷ್ಟ ಜಾತಿಗೂ ಅನ್ಯಾಯವಾಗದಂತೆ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಬೇಕು, ಹಾಸ್ಟೆಲ್‌ಗಳಿಗೆ ಪೀಠೋಪಕರಣಗಳು ಮತ್ತು ಪಾಠೋಪಕರಣಗಳು ಸಮರ್ಪಕವಾಗಿ ಪೂರೈಕೆಯಾಗಬೇಕು ಹಾಗೂ ನಿರಂತರವಾಗಿ ಪಾಠ ಏರ್ಪಾಡಾಗಬೇಕು, ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸುವ ಎಲ್ಲಾ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಬೇಕು, ರಾಜ್ಯದಲ್ಲಿ ನಾಗರೀಕ ಹಕ್ಕುಗಳ ರಕ್ಷಣೆ ಕಾಯಿದೆ ಮತ್ತು ದೌರ್ಜನ್ಯ ತಡೆ ಕಾಯ್ದೆಗಳ ಅನುಷ್ಟಾನ ಸಮರ್ಪಕವಾಗಿ ಆಗುತ್ತಿಲ್ಲ. ಅಪರಾಧಗಳ ಪತ್ತೆ ಮತ್ತು ವಿಚಾರಣೆ ಸರಿಯಾಗಿ ನಡೆದು ರಕ್ಷಣೆಯಾಗುವ ಪ್ರಮಾಣ ಸರಿಯಾಗಿ ಆಗುವಂತೆ ನಿಗಾವಹಿಸಲು ಪ್ರತ್ಯೇಕ ಸಮಿತಿಯನ್ನು ಸ್ಥಾಪಿಸಬೇಕು.
ಪ್ರತಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಭೂಮಿ ಮೀಸಲಿರಿಸಬೇಕು, ಎಸ್.ಸಿ/ಎಸ್.ಟಿ ಮೀಸಲಾತಿಗೆ ನಿಗಧಿಪಡಿಸಿರುವ ಆದಾಯಮಿತಿ ವಾರ್ಷಿಕ ಹದಿನೈದು(೧೫) ಲಕ್ಷಕ್ಕೆ ಏರಿಸಬೇಕು,
ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡು ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಟಾನಕ್ಕೆ ತರಬೇಕು. ಹಂಗಾಮಿ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು, ಖಾಸಗಿ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು. ಎಸ್.ಸಿ/ಎಸ್.ಟಿ ಸಮುದಾಯ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಈ ಮೊದಲು ಫಾರಂ ೫೭ಕ್ಕೆ ಹಾಕಿರುವವರಿಗೆ ಕೂಡಲೇ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡಬೇಕು. ಫಾರಂ.೫೭, ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು.
ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯಗಳ ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಅನುಸರಿಸುವುದಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು, ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಎಸ್.ಸಿ/ಎಸ್.ಟಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು, ವಿವಿಧ ವಸತಿ ಯೋಜನೆಯಡಿ ಅರ್ಹ ಬಡ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಬೇಕು ಹಾಗೂ ಸಹಾಯ ಧನವನ್ನು ೫ ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ನಿರಾಶ್ರಿತರಿಗೆ ನಿವೇಶನ ಮತ್ತು ಹಕ್ಕುಪತ್ರ ನೀಡಿ ದಾಖಲೆ ಇಡಬೇಕು, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಎಸ್.ಸಿ/ಎಸ್.ಟಿ ದವರಿಗೆ ಮೀಸಲಾಗಿರುವ ಡಿ.ಸಿ. ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಬೇಕು, ಭೂ ಒಡೆತನ ಯೋಜನೆಯಲ್ಲಿ ಸುಮಾರು ವರ್ಷದಿಂದ ಹಣ ಮೀಸಲಿಟ್ಟಿಲ್ಲ ಕೂಡಲೇ ಸರ್ಕಾರ ಈ ಯೋಜನೆಗೆ ಹಣವನ್ನು ಮಂಜೂರು ಮಾಡಬೇಕು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸುರಕ್ಷಣಾ ಕಾಯ್ದೆ ೨೦೨೦, ಈ ಕೂಡಲೇ ರದ್ದು ಮಾಡಬೇಕು, ಎಸ್‌ಸಿಪಿಟಿಎಸ್‌ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಬಾರದು ಹಾಗೂ ಈಗಾಗಲೇ ಬಳಸಿರುವ ಹಣವನ್ನು ವಾಪಸ್ ಎಸ್.ಸಿ/ಎಸ್.ಟಿಗಳ ಅಭಿವೃದ್ಧಿಗೆ ಮೀಸಲಿಡಬೇಕು, ಕೆಎಸ್‌ಎಫ್‌ಸಿ ಮತ್ತು ಬ್ಯಾಂಕ್ ಗಳಿಂದ ದಲಿತರಿಗೆ ೪% ಬಡ್ಡಿಯಂತೆ ೧೦ ಕೋಟಿ ರೂ.ವರೆಗೆ ಉದ್ಯಮ ನಡೆಸಲು ಸಾಲ ಸೌಲಭ್ಯ ನೀಡುವ ಯೋಜನೆಯಲ್ಲಿರುವ ಷರತ್ತುಗಳನ್ನು ಸಡಿಲಪಡಿಸಿ ನಗರ ಪ್ರದೇಶದಲ್ಲಿ ನಿವೇಶನ, ಮನೆ ಇತರೆ ಚರಾಸ್ತಿಗಳ ಕೋಲ್ಯಾಟರಲ್ ಇರಬೇಕು ಎಂಬ ನಿಯಮ ಸಡಿಲಪಡಿಸಬೇಕು. ಎಂದು ಮನವಿಯಲ್ಲಿ ತಿಳಿಸಿದಾರೆ.
ಈ ಸಮದರ್ಭದಲ್ಲಿ ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ಮಹಾದೇವ ಕೋಳಕೂರ, ಜಿಲ್ಲಾ ಸಂಚಾಲಕ ರಾಮಣ್ಣ ನೂಲಾ ಮೋಘಾ, ಜಿಲ್ಲಾ ಸಂ.ಸAಚಾಲಕರಾದ ಸಾತಪ್ಪ ಆದ. ತೆಗನೂರ, ರಾಜಶೇಖರ ಎಸ್. ಪಡಸಾವಳಿ, ಜಿಲ್ಲಾ ಖಜಾಂಚಿ ನಾಗಪ್ಪ ವಳಕೇರಿ, ತಾಲೂಕಾ ಸಂಚಾಲಕ ವಿಶ್ವರಾಧ್ಯ ಗಂವ್ಹಾರ, ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಗೌತಮ ಪಾಳಾ ಸೇರಿದಂತೆ ಕಾರ್ಯಕರ್ತರು ಇದ್ದರು.




























