ಸದನದಲ್ಲಿ ಎಸ್‌ಐಟಿ ವರದಿ ಮಂಡನೆಗೆ ಆಗ್ರಹ

ಧರ್ಮಸ್ಥಳ ಪ್ರಕರಣ

ಬೆಂಗಳೂರು, ಜ. ೩೦- ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಯ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಬಿಜೆಪಿಯ ಸುರೇಶ್‌ಕುಮಾರ್ ಆಗ್ರಹಿಸಿದರು.
ವಿಧಾನಸಭೆಯಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆ ಏನಾಯಿತು, ತನಿಖೆ ಮಾಡಿದ್ದೀರಿ, ಇನ್ನು ವರದಿ ಮಂಡಿಸಿಲ್ಲ. ಧರ್ಮಸ್ಥಳ ಇನ್ನೂ ಕಳಂಕ ಹೊತ್ತುಕೊಂಡೇ ಇರಬೇಕಾ, ವರದಿಯನ್ನು ಸದನದ ಮುಂದಿಡಿ ಎಂದು ಒತ್ತಾಯಿಸಿದರು.


ಧರ್ಮಸ್ಥಳ ಬುರುಡೆ ಗ್ಯಾಂಗ್, ಗಡಿಪಾರು ಇವೆಲ್ಲಾ ರಾಮಾಯಣ. ಈ ಬಗ್ಗೆ ನಾನು ಹೆಚ್ಚು ಹೇಳಲ್ಲ. ಏನೇ ಇರಲಿ, ಧರ್ಮಸ್ಥಳದ ಎಸ್‌ಐಟಿ ವರದಿಯನ್ನು ಮಂಡಿಸಿ. ಧರ್ಮಸ್ಥಳದ ಬಗ್ಗೆ ಸಲ್ಲಿಸಲಾಗಿದ್ದ ಪಿಎಎಲ್ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಪೈಸಾ ವಸೂಲಿ ಲಿಟಿಗೇಷನ್ ಹೇಳಿದೆ. ಧರ್ಮಸ್ಥಳ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರ. ಬಹಳ ಜನರಿಗೆ ಮಂಜುನಾಥ ಭರವಸೆಯಾಗಿ ಉಳಿದಿದ್ದಾರೆ. ನಂಬಿಕೆಗೆ ಕೆಲವರು ಮಸಿ ಬಳಿಯುವ ಪ್ರಯತ್ನ ಮಾಡಿದರು. ಏನೇ ಆಗಲಿ, ಸತ್ಯಾಂಶ ಗೊತ್ತಾಗಬೇಕಿದೆ. ಎಸ್‌ಐಟಿ ತನಿಖಾ ವರದಿಯನ್ನು ಮಂಡಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.


ವಿಧಾನಸಭೆಯಲ್ಲಿ ಶ್ರೀಸಾಮಾನ್ಯರ ಹಿತ ಕಾಯುವ ಒಂದೂ ಚರ್ಚೆಯಾಗುತ್ತಿಲ್ಲ. ಹೀಗಾದರೆ ಅರ್ಥವಿಲ್ಲದಂತಾಗುತ್ತದೆ. ಶ್ರೀಸಾಮಾನ್ಯರ ಹಿತ ಕಾಯುವ, ಅವರ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಬೇಕಿದೆ. ವಿಧಾನಸಭೆಯ ಬಗ್ಗೆ ಜನಸಾಮಾನ್ಯರು ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಎಂದು ಅವರು ಹೇಳಿದರು.
ಬಳ್ಳಾರಿ ಗಲಭೆಯ ಬಗ್ಗೆಯೂ ಪ್ರಸಾಪಿಸಿದ ಅವರು, ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿಯನ್ನು ಅವರ ಸಂಪ್ರದಾಯದಂತೆ ಹೂಳಬೇಕಿತ್ತು. ಆದರೆ ಪೊಲೀಸರು ಶವವನ್ನು ಸುಟ್ಟು ಬಿಟ್ಟರು. ಮೃತಪಟ್ಟ ವ್ಯಕ್ತಿಯ ತಾಯಿ ಕೇಳಿದರೆ ಶಾಸಕರು ಹೇಳಿದ್ದಾರೆ ಸುಟ್ಟಿದ್ದೇವೆ ಎಂದೆಲ್ಲಾ ಉತ್ತರ ಕೊಟ್ಟಿದ್ದಾರೆ. ಇದು ಸರಿಯಲ್ಲ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.


ರಾಜ್ಯದಲ್ಲಿರುವುದು ಒಳ ಜಗಳದ ಸರ್ಕಾರ. ತಮ್ಮ-ಮಗನ ಮುಸುಕಿನ ಗುದ್ದಾಟದ ಸರ್ಕಾರ. ಬೆಲೆ ಏರಿಕೆಯ ಸರ್ಕಾರ. ರಾಜಕೀಯ ಸೇಡನ್ನು ತೀರಿಸುವ ಸರ್ಕಾರ ಎಂದು ಸುರೇಶ್‌ಕುಮಾರ್ ಹೇಳಿದರು.


ಸರ್ಕಾರದಲ್ಲಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ವರ್ಷ ವ್ಯರ್ಥವಾಗಿ ಕಳೆದಿದೆ ಎಂದು ಹೇಳಿದ ಅವರು, ಜನರು ಬಯಸಿದಂತೆ ನಡೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.


ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ ಎಂದು ಸುರೇಶ್‌ಕುಮಾರ್ ಹೇಳಿದಾಗ, ದರ ಏರಿಕೆಯ ವಿಚಾರದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಸುರೇಶ್‌ಕುಮಾರ್ ನಡುವೆ ಮಾತಿನ ಚಕಮಕಿ ನಡೆದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಚಿನ್ನ-ಬೆಳ್ಳಿ ದರ ಏರಿಕೆಯಾಗುತ್ತಿದೆ. ರೂಪಾಯಿ ಮೌಲ್ಯ ಕುಸಿದಿದೆ. ಇದರಿಂದಲೇ ಬೆಲೆ ಏರಿಕೆಗಳಾಗುತ್ತಿವೆ. ಈ ಬಗ್ಗೆಯೂ ಮಾತನಾಡಿ ಎಂದು ಪ್ರಿಯಾಂಕ ಖರ್ಗೆ ಹೇಳಿದರು.