Home ಜಿಲ್ಲೆ ಆಲಿಂಯಬರ ಗ್ರಾಮದ ರಸ್ತೆ- ಸೇತುವೆ ಕಾಮಗಾರಿ ವಿಳಂಬ: ಜಿಲ್ಲಾಧಿಕಾರಿಗಳಿಗೆ ದೂರು

ಆಲಿಂಯಬರ ಗ್ರಾಮದ ರಸ್ತೆ- ಸೇತುವೆ ಕಾಮಗಾರಿ ವಿಳಂಬ: ಜಿಲ್ಲಾಧಿಕಾರಿಗಳಿಗೆ ದೂರು

ಬೀದರ್:ಮಾ.22: ತಾಲ್ಲೂಕಿನ ಆಲಿಂಯಬರ ಗ್ರಾಮದಲ್ಲಿ ಮುಖ್ಯ ರಸ್ತೆ ಕಾಮಗಾರಿ ಹಾಗೂ ಸೇತುವೆ ನಿರ್ಮಾಣ ವಿಳಂಬವಾಗಿರುವುದನ್ನು ಖಂಡಿಸಿ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹ ಸಮಿತಿ (ರಿ), ಕಲ್ಯಾಣ ಕರ್ನಾಟಕ ವಿಭಾಗದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ಸಮಿತಿಯ ಕಲಬುರಗಿ ವಿಭಾಗೀಯ ಅಧ್ಯಕ್ಷರಾದ ಸಂಗಮೇಶ ಭಾಂದೊಡ್ಡಿ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಆಲಿಂಯಬರ ಗ್ರಾಮದ ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಪ್ರಾಥಮಿಕ ಶಾಲೆಯವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಪೂರ್ಣಗೊಳ್ಳದೆ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾಮಗಾರಿ ವಿಳಂಬಕ್ಕೆ ಕಾರಣವಾದ ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದಲ್ಲದೆ, ಗ್ರಾಮದಲ್ಲಿರುವ ಭವಾನಿ ಮಂದಿರದ ಸಮೀಪದ ಸೇತುವೆ ಮಳೆಗಾಲದಲ್ಲಿ ಹಳ್ಳ ತುಂಬಿ ನೀರು ಸೇತುವೆ ಮೇಲೆ ಹರಿಯುವ ಕಾರಣ ಮೂರು ದಿನಗಳವರೆಗೆ ಸಂಚಾರ ಸ್ಥಗಿತವಾಗುತ್ತದೆ. ಇದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತುರ್ತು ವೈದ್ಯಕೀಯ ಸೇವೆಗಳಿಗೂ ಅಡಚಣೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಸ್ಥಳೀಯ ಶಾಸಕ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್ ಖಾನ್ ಅವರು ಗ್ರಾಮಕ್ಕೆ ಭೇಟಿ ನೀಡಿ ಸೇತುವೆ ನಿರ್ಮಾಣಕ್ಕೆ 5 ರಿಂದ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರೂ, ಆರು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಹೊಸ ಸೇತುವೆ ನಿರ್ಮಾಣವನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಮಿತಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದೆ.

ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಮಿತಿಯ ಜಿಲ್ಲಾಧ್ಯಕ್ಷ ವಿಶಾಲ ದೊಡ್ಡಿ, ಜಿಲ್ಲಾ ಖಜಾಂಚಿ ಜಗನ್ನಾಥ ಶಿಂಧೆ, ಅಲಿಯಂಬರ ಗ್ರಾಮಸ್ಥರಾದ ರೇವಣಸಿದ್ದ ಹಡಪದ, ದೇವೇಂದ್ರ ರಾಜನಾಳ, ರಮೇಶ ಭಾವಿದೊಡ್ಡಿ, ಶಾಮರಾವ ಗಂಜೆ, ಸಂಗಮೇಶ ಧನ್ನೂರೆ, ಬೀರಗೊಂಡ ಘೋಡಂಪಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.