
ಬೆಂಗಳೂರು, ಮಾ. ೨೨- ಸಾಕಷ್ಟು ಹಗ್ಗಜಗ್ಗಾಟ, ಲೆಕ್ಕಾಚಾರದ ಬಳಿಕ ಕಾಂಗ್ರೆಸ್ ಪಕ್ಷ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ದಿ. ಶಾಮನೂರನ ಶಿವಶಂಕರಪ್ಪನವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರವರ ಪುತ್ರ ಸಮರ್ಥ್ ಮಲ್ಲಿಕಾರ್ಜುನ್ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ದಿ. ಹೆಚ್.ವೈ. ಮೇಟಿಯವರ ಕಿರಿಯ ಪುತ್ರ ಉಮೇಶ್ ಮೇಟಿಯವರನ್ನು ಹೆಸರನ್ನು ಪ್ರಕಟಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ರವರು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮರ್ಥ ಮಲ್ಲಿಕಾರ್ಜುನ್ ಹಾಗೂ ಬಾಗಲಕೋಟೆ ಕ್ಷೇತ್ರಕ್ಕೆ ಉಮೇಶ್ ಮೇಟಿ ಹೆಸರನ್ನು ಪ್ರಕಟಿಸಿದ್ದಾರೆ.
ಸಾಕಷ್ಟು ಲೆಕ್ಕಾಚಾರ, ಎಲ್ಲವನ್ನು ಅಳೆದು ತೂಗಿ ಕಾಂಗ್ರೆಸ್ ಪಕ್ಷ ಈ ಟಿಕೆಟ್‌ನ್ನು ಘೋಷಣೆ ಮಾಡಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಶಾಮನೂರು ಕುಟುಂಬದ ಪಾಲಾಗಿದ್ದರೆ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಹೆಚ್.ವೈ. ಮೇಟಿಯವರ ಕುಟುಂಬಕ್ಕೆ ನೀಡಿದ್ದಾರೆ. ಈ ಎರಡು ಕ್ಷೇತ್ರಗಳಲ್ಲೂ ಉಪಚುನಾವಣೆಯಲ್ಲಿ ಅನುಕಂಪದ ಲಾಭ ಪಡೆಯುವ ಲೆಕ್ಕಾಚಾರ ಅಡಗಿದೆ.
ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಆ ಕ್ಷೇತ್ರಗಳಲ್ಲಿ ನಿಧರಾಗುವ ಶಾಸಕರ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ದತಿಯನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ರೂಢಿಸಿಕೊಂಡಿದ್ದು, ಈ ಉಪಚುನಾವಣೆಯಲ್ಲೂ ಅದನ್ನೇ ಮುಂದುವರೆಸಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡಗಳು ಇದ್ದವಾದರೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ನಿನ್ನೆ ಎಲ್ಲರ ಜತೆಯೂ ಮಾತನಾಡಿ ಅಲ್ಪಸಂಖ್ಯಾತರ ಮನವೊಲಿಸಿ ಸಮರ್ಥ ಶಾಮನೂರು ರವರ ಹೆಸರನ್ನು ಅಂತಿಮಗೊಳಿಸಿದ್ದರು.
ಹಾಗೆಯೇ ಬಾಗಲಕೋಟೆ ಕ್ಷೇತ್ರದಿಂದ ಉಮೇಶ್ ಮೇಟಿರವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿತ್ತು.
ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅನುಮೋದನೆ ಮೇರೆಗೆ ಎರಡೂ ಕ್ಷೇತ್ರಗಳಿಗೂ ಅಭ್ಯರ್ಥಿ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ಬಾಗಲಕೋಟೆಯಲ್ಲೂ ಟಿಕೆಟ್‌ಗಾಗಿ ದಿ. ಮೇಟಿಯವರ ಕುಟುಂಬದಲ್ಲೇ ಪೈಪೋಟಿ ಇತ್ತು. ಮೇಟಿಯವರ ಪುತ್ರಿ ಮಹದೇವಿ ಮೇಟಿರವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿ. ಹೆಚ್.ವೈ. ಮೇಟಿಯವರ ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಕರೆಸಿ ಸಭೆ ನಡೆಸಿ, ನಾವು ಯಾರಿಗೆ ಟಿಕೆಟ್ ಕೊಡುತ್ತೇವೋ ಅವರ ಪರ ಕೆಲಸ ಮಾಡಬೇಕು ಎಂದು ಸೂಚಿಸಿದ್ದರು.
ಮೇಟಿವರ ಪುತ್ರಿ ಮಹದೇವಿ ಮೇಟಿ ತಮ್ಮ ಸಹೋದರ ಮಲ್ಲಿಕಾರ್ಜುನ ಮೇಟಿ ಬದಲು ಮತ್ತೊಬ್ಬ ಸಹೋದರ ಉಮೇಶ್ ಮೇಟಿಯವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ತಾವು ಚುನಾವಣಾ ಕಣಕ್ಕೆ ಇಳಿಯುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್ ಹೈಕಮಾಂಡ್ ಉಮೇಶ್ ಮೇಟಿಯವರಿಗೆ ಟಿಕೆಟ್ ಘೋಷಣೆ ಮಾಡಿರುವುದರಿಂದ ಎಲ್ಲಾ ಗೊಂದಲಗಳು ಪರಿಹಾರವಾದಂತಾಗಿದ್ದು, ಮಹದೇವಿ ಮೇಟಿಯವರ ಆಶಯವೂ ಈಡೇರಿದಂತಾಗಿದೆ.
ಈಗ ಎರಡೂ ಕ್ಷೇತ್ರಗಳಲ್ಲೂ ಟಿಕೆಟ್ ಹಂಚಿಕೆಯ ಗೊಂದಲಗಳು ಮುಗಿದಿದ್ದು, ಮುಂದಿನ ಹಣಾಹಣಿಗೆ ಕಾಂಗ್ರೆಸ್ ಪಕ್ಷ ಸಜ್ಜಾಗಿದೆ.
ಕಾಂಗ್ರೆಸ್ ಪಕ್ಷ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದರಿಂದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಮರ್ಥ್ ಮಲ್ಲಿಕಾರ್ಜುನ್ ಮತ್ತು ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪ ನಡುವೆ ಚುನಾವಣಾ ಗೆಲುವಿಗೆ ಹಣಾಹಣಿಗೆ ನಡೆಯಲಿದ್ದು, ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿ ಮಠ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ನಾಳೆ ನಾಮಪತ್ರ: ಶಕ್ತಿ ಪ್ರದರ್ಶನ
ಉಪಚುನಾವಣೆಗೆ ನಾಳೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಕ್ಷದ ಬಿ ಫಾರಂ ಜತೆ ನಾಮಪತ್ರ ಸಲ್ಲಿಸಲಿದ್ದು, ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಎರಡು ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ನಾಳಿನ ನಾಮಪತ್ರ ಸಲ್ಲಿಕೆ ವೇದಿಕೆಯಾಗಲಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಸಮರ್ಥ ಮಲ್ಲಿಕಾರ್ಜುನ್ ಅವರು ಬಿ ಫಾರಂ ಇಲ್ಲದೆ ಶುಭದಿನವೆಂದು ಕಳೆದ ಶುಕ್ರವಾರವೇ ನಾಮಪತ್ರ ಸಲ್ಲಿಸಿದ್ದರು. ಹಾಗೆಯೇ ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪನವರು ಕಳೆದ ಶುಕ್ರವಾರವೇ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಬಾಗಲಕೋಟೆಯಲ್ಲಿ ಬಿಜೆಪಿಯ ವೀರಣ್ಣ ಚರಂತಿ ಮಠ ಅವರು ಸಹ ಕಳೆದ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು.
ನಾಳೆ ಎರಡು ಪಕ್ಷಗಳ ಅಭ್ಯರ್ಥಿಗಳು ಎರಡು ಪಕ್ಷಗಳಲ್ಲೂ ಬಿ ಫಾರಂ ಸಹಿತ ತಮ್ಮ ಅಪಾರ ಬೆಂಬಲಿಗರ ಜತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಈ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ಮುಖಂಡರುಗಳು ಭಾಗಿಯಾಗಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪ್ರಮುಖ ಮುಖಂಡರುಗಳು ಪಾಲ್ಗೊಳ್ಳಲಿದ್ದು, ನಾಳಿನ ನಾಮಪತ್ರ ಸಲ್ಲಿಕೆ ಎರಡು ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.































