Home ಜಿಲ್ಲೆ ಬೆಂಗಳೂರು ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ

ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ

ಕೋಲಾರ,ಏ,೯-ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆಯನ್ನು ಜಿಲ್ಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ, ಶಿಸ್ತುಬದ್ಧವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕಳೆದ ಬಾರಿ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳ ಗೈರುಹಾಜರಿಯ ಬಗ್ಗೆ ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಠಿಣ ಸೂಚನೆ ನೀಡಿದರು. “ಅಂಬೇಡ್ಕರ್ ಜಯಂತಿ ರಾಷ್ಟ್ರೀಯ ಹಬ್ಬ. ಅಂದು ಬೆಳಿಗ್ಗೆಯಿಂದ ಸಂಜೆಯ ಕಾರ್ಯಕ್ರಮದ ಮುಕ್ತಾಯದವರೆಗೆ ಎಲ್ಲಾ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದರು.


ಜಯಂತಿಯ ಅಂಗವಾಗಿ ಇಡೀ ಕೋಲಾರ ನಗರವನ್ನು ಒಂದು ತಿಂಗಳ ಕಾಲ ನೀಲಿ ಬಣ್ಣದ ಧ್ವಜಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲು ತೀರ್ಮಾನಿಸಲಾಯಿತು.


ಅಂದು ಬೆಳಿಗ್ಗೆ ೧೦:೩೦ಕ್ಕೆ ಮೆರವಣಿಗೆ ಆರಂಭವಾಗಲಿದ್ದು, ವಿವಿಧ ಇಲಾಖೆಗಳಿಂದ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ದಚಿತ್ರಗಳು ಪಾಲ್ಗೊಳ್ಳಲಿವೆ.


ಮುಖಂಡರ ಬೇಡಿಕೆಯಂತೆ ಅಂಬೇಡ್ಕರ್ ಭವನಕ್ಕೆ ಜಾಗ ಮೀಸಲಿಡುವುದು ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಅಂಬೇಡ್ಕರ್ ಅವರ ಜೀವನ ಸಂದೇಶ ಸಾರುವ ಎಲ್‌ಇಡಿ ಡಿಸ್‌ಪ್ಲೇ ಅಳವಡಿಸಲು ಜಿಲ್ಲಾಧಿಕಾರಿಗಳು ಸಮ್ಮತಿ ಸೂಚಿಸಿದರು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ ಟಾಪ್ ೧೦ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ನಿರ್ಧರಿಸಲಾಯಿತು.


’ಸಂವಿಧಾನವೇ ಬೆಳಕು’ ಎಂಬ ಶೀರ್ಷಿಕೆಯಡಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಹೊರತರಲು ಸಭೆಯಲ್ಲಿ ನಿರ್ಧರಿಸಲಾಯಿತು.


ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ ಮತ್ತು ಆಹಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಪ್ರತಿ ಸಮಿತಿಗೆ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಿ, ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಲಾಯಿತು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ನಟೇಶ್, ಅಪರ ಪೊಲೀಸ್ ವರಿಷ್ಟಾಧಿಕಾರಿ ರವಿಶಂಕರ್, ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನ್, ಕೆ.ಎಸ್.ಆರ್.ಟಿ.ಸಿ ವಿಭಾಗೀ ನಿಯಂತ್ರಣಾಧಿಕಾರಿ ಶ್ರೀನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಿ.ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಜಗಧೀಶ್, ಸಮಾಜದ ಮುಂಖಡರಾದ ಡಾ.ಎಂ.ಚಂದ್ರಶೇಖರ್, ಟಿ.ವಿಜಯಕುಮಾರ್, ಡಿಪಿಎಸ್ ಮುನಿರಾಜು, ಪಂಡಿತ್ ಮುನಿವೆಂಕಟಪ್ಪ, ಕೆ. ಜಯದೇವ್, ದಲಿತ್ ನಾರಾಯಣಸ್ವಾಮಿ, ಹಾರೋಹಳ್ಳಿ ರವಿ, ಚಂದ್ರಮೌಳಿ, ರಾಜಕುಮಾರ್, ರೈತ ಮುಖಂಡ ಅಬ್ಬಿಣಿ ಶಿವಪ್ಪ, ಬಿ. ಶ್ರೀರಂಗ, ಕುವೆಂಪು ನಗರ ಆನಂದ್, ವಾಲ್ಮೀಕಿ ನರಸಿಂಹಯ್ಯ, ವೆಂಕಟಾಚಲಪತಿ, ಆಲೇರಿ ಮುನಿರಾಜು, ಕಾಂಗ್ರೆಸ್ ಮುಖಂಡ ರವಿಕುಮಾರ್, ಕೋಟೆ ಶ್ರೀನಿವಾಸ್, ಡಿ ಎಸ್ ಎಸ್ ಮಂಜುಳ, ನಾಗೇಶ್, ಮತ್ತಿಕುಂಟೆ ಕೃಷ್ಣಪ್ಪ, ಗಾಂಧೀನಗರ ಲಕ್ಷ್ಮಣ, ವಾಲ್ಮೀಕಿ ಮಂಜುಳ, ಮತ್ತಿಕುಂಟೆ ನಾರಾಯಣಸ್ವಾಮಿ, ನಾಗನಾಳ ಶಂಕರ್ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ದಲಿತ ಸಂಘಟನೆಗಳ ಹಿರಿಯ ಮುಖಂಡರು ಉಪಸ್ಥಿತರಿದ್ದರು.