
ಬೀದರ್: ಜೂ.13:ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಡೇವಿಡ್ ಸಿಮಿಯೋನ್ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ ಎಂದು ಜೆ.ಟಿ. ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದ ಸದಸ್ಯ ಜೈಕರ ರತ್ನಪ್ಪ ಹೇಳಿದರು.
ಜೆ.ಟಿ. ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಗರದ ಮಂಗಲಪೇಟೆ ವೃತ್ತದ ಸಮೀಪ ಡೇವಿಡ್ ಸಿಮಿಯೋನ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕೆಳ ವರ್ಗ ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಶ್ರೇಷ್ಠ ಚಿಂತಕ, ಮುತ್ಸದ್ದಿ ರಾಜಕಾರಣಿಯಾಗಿದ್ದರು. ವಿಧಾನ ಪರಿಷತ್ ಉಪ ಸಭಾಪತಿಯಾಗಿ ಅವರ ಸಲ್ಲಿಸಿದ ಸೇವೆ ಅಮೋಘವಾದದ್ದು ಎಂದು ಬಣ್ಣಿಸಿದರು.
ಕ್ರೈಸ್ತ ಸಮುದಾಯಕ್ಕೆ ಇನ್ನೂ ಅವರ ನಾಯಕತ್ವ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದ್ದಾಗಲೇ ಅವರು ಅಗಲಿರುವುದು ಅತೀವ ದುಃಖ ಉಂಟು ಮಾಡಿದೆ. ಅವರ ನಿಧನದಿಂದ ಕ್ರೈಸ್ತ ಸಮುದಾಯ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ದೇವರು ಅವರ ಆತ್ಮ ಹಾಗೂ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಸಂಘದ ಅಧ್ಯಕ್ಷ ಬಿ.ಕೆ. ಸುಂದರರಾಜ, ಪದಾಧಿಕಾರಿಗಳಾದ ಡಾ. ಧನರಾಜ ತುಡಮೆ, ಟಿ.ಎಂ. ಮಚ್ಚೆ, ಸುನೀಲ್ ಮಾಳಗೆ, ಯೇಶಪ್ಪ ಮೇತ್ರೆ, ಶಿರೋಮಣಿ ತಾರೆ, ಶಿರೋಮಣಿ ಡಾಕುಳಗಿ, ಟಿ.ಜೆ. ಹಾದಿಮನಿ, ಶರಣಪ್ಪ ಸಿಂಗಾರೆ, ಟಿ.ಡಿ. ಜಾನ್, ಡೇವಿಡ್ ಸೋಲಪುರ, ಮಾರುತಿರಾವ್ ನ್ಯಾಮತಾಬಾದ್, ರಾಬರ್ಟ್ ಡೇವಿಡ್, ಜೆ. ಸೈಮನ್ ಪಾಸ್ಟರ್, ಶಾಂತಕುಮಾರ ಪಾಸ್ಟರ್, ಬೆಂಜಮಿನ್ ಅಷ್ಟೂರ, ಮಾರುತಿ ಮಾಸ್ಟರ್ ಮತ್ತಿತರರು ಇದ್ದರು.