
ಬೀದರ್,ಫೆ.೮-ವೇಶ್ಯಾವಾಟಿಕೆ ನಡೆಸಲು ಅತ್ತೆ ಪೀಡಿಸಿದರಿಂದ ನೊಂದ ಮಹಿಳೆಯೊಬ್ಬರು ೧೧ ತಿಂಗಳ ಮಗು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ನಡೆದಿದೆ.
ಅಂಜನಾಬಾಯಿ ಶೇಖರ್ ಪಾಟೀಲ್(೨೨) ಮೃತ ಮಹಿಳೆಯಾಗಿದ್ದು,ಪತಿ ಮನೆಯವರಿಂದ ಕಿರುಕುಳದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
೨೦೨೨ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜತೆ ಅಂಜನಾಬಾಯಿ ವಿವಾಹ ನಡೆದಿದ್ದು, ಮದುವೆ ಬಳಿಕ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಿ ಯುವತಿಗೆ ನಿತ್ಯವೂ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಅಂಜನಾಬಾಯಿ ಪತಿ ಶೇಖರ್ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದ್ದು, ನಿತ್ಯವೂ ರಾತ್ರಿ ೧೧-೧೨ ಗಂಟೆ ಅವಧಿಯಲ್ಲಿ ಮನೆಗೆ ಬರುತ್ತಿದ್ದ. ಈ ಬಗ್ಗೆ ತಕರಾರು ಮಾಡಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದಳು. ಆದರೆ ಇದೇ ವಿಚಾರವಾಗಿ ಅತ್ತೆ ಮಾವ ಆಕೆ ಜೊತೆ ಜಗಳ ಮಾಡಿದ್ದಾರೆ. ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ ಎಂದೆಲ್ಲ ಹೀಯಾಳಿಸಿದ್ದಾರೆ.
ಜೊತೆಗೆ ನೀನು ವೇಶ್ಯಾವಾಟಿಕೆ ಮಾಡು ಎಂದು ಆಕೆಯನ್ನು ಪೀಡಿಸಿದ್ದು, ಆ ಬಗ್ಗೆ ಅಂಜನಾಬಾಯಿ ಹೆತ್ತವರ ಬಳಿಯೂ ಹೇಳಿಕೊಂಡಿದ್ದಳು. ಆದರೆ ಈ ಬಗ್ಗೆ ಪೋಷಕರು ಆಕೆಗೆ ಸಮಾಧಾನ ಮಾಡಿದ್ದು, ಇಂದೆಲ್ಲ ನಾಳೆ ಸರಿಹೋಗಬಹುದು ಎಂದು ತಿಳುವಳಿಕೆ ಹೇಳಿದ್ದರು. ಈ ನಡುವೆ ಕಿರುಕುಳ ತಾಳಲಾರದೆ ಅಂಜನಾಬಾಯಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಆಕೆಯ ತಂದೆ ವಿಜಯಕುಮಾರ್ ದೂರಿನ ಮೇರೆಗೆ ಮೃತಳ ಪತಿ ಶೇಖರ್ ಸೇರಿ ಮೂವರ ವಿರುದ್ಧ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇಬ್ಬರು ಯುವಕರ ಸಾವು:
ಪಾರ್ಟಿಗೆಂದು ಹೋದಾಗ ಸ್ಪಿರಿಟ್ ಕುಡಿದು ಅಸ್ವಸ್ಥರಾಗಿದ್ದ ಇಬ್ಬರು ಯುವಕರು ಮೃತಪಟ್ಟಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿಯಲ್ಲಿ ನಡೆದಿದೆ. ಫೆಬ್ರವರಿ ೪ರಂದು ಸ್ಪಿರಿಟ್ ಸೇವಿಸಿದ್ದ ಬಳಿಕ ನಾಲ್ವರು ಅಸ್ವಸ್ಥಗೊಂಡಿದ್ದರು. ಆ ಪೈಕಿ ಹುಬ್ಬಳ್ಳಿಯ ಕಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ರಮೇಶ್ ಹೊಸಹಳ್ಳಿ ಮತ್ತು ಅಮರಯ್ಯ ಹಿರೇಮಠ ಪ್ರಾಣ ಕಳೆದುಕೊಂಡಿದ್ದರೆ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.


























